ಹುಣಸೂರು: ತಾಲೂಕಿನ ಹನಗೋಡು ಹೋಬಳಿ ಹನಗೋಡು ಕ್ಲಸ್ಟರ್ ವ್ಯಾಪ್ತಿಯ ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಅಂಬೇಡ್ಕರ್ ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾದ ದಿನದಿಂದ ಸರಿಯಾಗಿ ಶಿಕ್ಷಕರು ಬಾರದೆ ಮಕ್ಕಳು ಪಾಠದಿಂದ ವಂಚಿತರಾಗಿದ್ದಾರೆ. ಈವರೆಗೆ ನೀಡುತ್ತಿದ್ದ ಬಿಸಿಯೂಟದ ಸಾಮಗ್ರಿಗಳು ಖಾಲಿಯಾಗಿ ಮಧ್ಯಾಹ್ನದ ಬಿಸಿಯೂಟಕ್ಕೂ ಕುತ್ತು ಬಂದಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದೆ ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಮೇ.16 ರಂದು ಶಾಲೆಗಳು ಆರಂಭವಾಗಿದ್ದು, ಅಂದಿನಿಂದಲೂ ಸರಿಯಾದ ಶಿಕ್ಷಕರ ನೇಮಕ ಮಾಡದೆ ಮಕ್ಕಳಿಗೆ ಪಾಠ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಶಾಲೆಗೆ ಸುಮಾರು 23 ಮಕ್ಕಳು ಬರುತಿದ್ದು, ಹಿಂದೆ ಇದ್ದ ಇಬ್ಬರು ಶಿಕ್ಷಕಿಯರು ವರ್ಗಾವಣೆಗೊಂಡಿದ್ದರು. ಹೀಗಾಗಿ ಶಿಕ್ಷಣ ಇಲಾಖೆವತಿಯಿಂದ ತಾತ್ಕಾಲಿಕವಾಗಿ ಶಿಕ್ಷಕರ ನೇಮಕ ಮಾಡಿದ್ದು, ನಿಯೋಜನೆ ಮಾಡಿರುವ ಶಿಕ್ಷಕರು ಸರಿಯಾದ ಸಮಯಕ್ಕೆ ಬಾರದಿರುವುದಕ್ಕೆ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಮುಖಂಡ ಕಿರಂಗೂರು ಸ್ವಾಮಿ ಮಾತನಾಡಿ, ಶಾಲೆ ಆರಂಭದ ದಿನದಿಂದಲೂ ನಿಯೋಜನೆಗೊಂಡ ಶಿಕ್ಷಕರು ಬರುವುದೇ ಮಧ್ಯಾಹ್ನದ ನಂತರ. ಬಂದರೂ ಸಹಿ ಮಾಡಿ ಹೊರಟು ಹೋಗುತ್ತಾರೆ. ಇನ್ನು ಮಕ್ಕಳ ಶೈಕ್ಷಣಿಕ ಪ್ರಗತಿ ಎಲ್ಲಿಂದ ಸಾಧ್ಯ. ನಿತ್ಯ ಮಕ್ಕಳು ಬೆಳಗ್ಗೆಯಿಂದ ಹೊರಾಂಗಣದಲ್ಲಿ ಓಡಾಡುತ್ತಿದ್ದಾರೆ. ಇಂದು ಗ್ರಾಮಸ್ಥರು ಶಾಲೆಗೆ ಭೇಟಿ ಇತ್ತ ವೇಳೆ ಶಿಕ್ಷಕರು ಬರದಿರುವುದು ಗೊತ್ತಾಗಿದೆ. ಅಡುಗೆ ಮನೆಯನ್ನು ಗಮನಿಸಿದಾಗ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಗೆ ಅಡುಗೆ ಸಿಬ್ಬಂದಿ ಬಂದಿದ್ದರೂ ತರಕಾರಿ, ಅಗತ್ಯ ಪದಾರ್ಥಗಳು ಖಾಲಿಯಾಗಿದೆ. ಶಿಕ್ಷಕರು ಬರದಿರುವ ಬಗ್ಗೆ ಹಲವು ಬಾರಿ ಬಿಇಓ ರವರ ಗಮನಕ್ಕೂ ತಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಬಿಸಿಯೂದಿಂದಲೂ ಮಕ್ಕಳು ವಂಚಿತರಾಗಿದ್ದಾರೆ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ರವಿಶಂಕರ್ ಗೆಲುವು ನಿಶ್ಚಿತ: ಸಚಿವ ಸೋಮಶೇಖರ್
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಕಿರಂಗೂರು ಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯೆ ನಂದಿನಿ ಮಾದೇವ, ಕಿರಂಗೂರು ಗ್ರಾಮದ ಮಾಜಿ ಯಜಮಾನ ಸಣ್ಣಯ್ಯ ವೈರ್ ಮುಡಯ್ಯ, ಶಿವರಾಜು, ನಾರಾಯಣಿ, ಅಡುಗೆ ಸಿಬ್ಬಂದಿ ಕಮಲಮ್ಮ, ಶಾಲೆ ಮಕ್ಕಳೊಂದಿಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.