Advertisement
ಎಲ್ಲಾ ಓಕೆ, ಸಂಕ್ರಾಂತಿಗೆ ಯಾಕೆ ಸಿನಿಮಾ ಬಿಡುಗಡೆ ಮಾಡಲು ನಮ್ಮ ಸ್ಯಾಂಡಲ್‌ವುಡ್ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಉತ್ತರ ಪರಭಾಷಾ ಅಬ್ಬರ. ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬವನ್ನು ಚೆನ್ನಾಗಿ ಬಳಸಿಕೊಳ್ಳುವ ಚಿತ್ರರಂಗಗಳೆಂದರೆ ಅದು ತಮಿಳು, ತೆಲುಗು. ತಮಿಳಿನವರಿಗೆ ಸಂಕ್ರಾಂತಿ (ಪೊಂಗಲ್) ದೊಡ್ಡ ಹಬ್ಬ. ಹಾಗಾಗಿ, ಆ ಸಮಯದಲ್ಲಿ ಸ್ಟಾರ್ ಸಿನಿಮಾಗಳನ್ನು ರಿಲೀಸ್ ಮಾಡುವುದು ವಾಡಿಕೆ. ಈ ವರ್ಷವೂ ತಮಿಳು, ತೆಲುಗಿನಿಂದ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಮುಖ್ಯವಾಗಿ ತಮಿಳಿನ ಧನುಶ್ ನಟನೆಯ “ಕ್ಯಾಪ್ಟನ್ ಮಿಲ್ಲರ್’ ಇಂದು ತೆರೆಕಂಡರೆ, ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ “ಗುಂಟೂರು ಖಾರಂ’ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ “ಹನುಮಾನ್’, “ಅಯಲನ್’, “ಸೈಂಧವ’, “ನಾ ಸಾಮಿ ರಂಗ’, “ಮೇರಿ ಕ್ರಿಸ್ಮಸ್’ ಚಿತ್ರಗಳು ಇಂದು ತೆರೆಕಾಣುತ್ತಿವೆ.
Related Articles
Advertisement
ಸಂಕ್ರಾಂತಿಗೆ ಸ್ಯಾಂಡಲ್‌ವುಡ್‌ನಿಂದ ಸಿನಿಮಾಗಳು ಬಿಡುಗಡೆಯಾಗದೇ ಇರಬಹುದು. ಆದರೆ, ಸಿನಿಮಾ ಪ್ರೇಮಿಗಳಿಗೆ ಟ್ರೇಲರ್, ಟೀಸರ್ ಹಾಗೂ ಸಿನಿಮಾಗಳ ವಿಡಿಯೋ ಸಾಂಗ್‌ಗಳನ್ನು ಬಿಡುಗಡೆ ಮಾಡಲು ಹಲವು ಚಿತ್ರತಂಡಗಳು ಮುಂದಾಗಿವೆ. ಇಂದು “ಉಪಾಧ್ಯಕ್ಷ’, “ಕೇಸ್ ಆಫ್ ಕೊಂಡಾಣ’, “ಬ್ಯಾಡ್’ ಚಿತ್ರಗಳ ಟ್ರೇಲರ್, “ಜಸ್ಟ್ ಪಾಸ್’ ಸಿನಿಮಾದ ವಿಡಿಯೋ ಸಾಂಗ್, “ಗಜರಾಮ’ ಚಿತ್ರದ ಟೀಸರ್ ಸೇರಿದಂತೆ ಇನ್ನೂ ಕೆಲವು ಚಿತ್ರಗಳ ಟೈಟಲ್, ಫಸ್ಟ್‌ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಲಿವೆ. ಸಿನಿಮಾ ಪ್ರೇಮಿಗಳು ಇದರಲ್ಲೇ ಖುಷಿ ಕಂಡು, ಮುಂದಿನ ಹಾದಿಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಸಿನಿಮಂದಿಯದ್ದು.
ಒಂದ್ ಕಡೆ ಎಕ್ಸಾಂ ಇನ್ನೊಂದ್ ಕಡೆ ಸ್ಟಾರ್
ಫೆಬ್ರವರಿ ತಿಂಗಳಲ್ಲಿ ಸಿನಿ ಟ್ರಾಫಿಕ್ ಜೋರಾಗಿರಲು ಮುಖ್ಯವಾಗಿ ಎರಡು ಕಾರಣ, ಒಂದು ಶಾಲಾ- ಕಾಲೇಜುಗಳ ಪರೀಕ್ಷೆಯಾದರೆ, ಪರೀಕ್ಷೆ ಬಳಿಕ ಬರಲಿರುವ ಸ್ಟಾರ್ ಸಿನಿಮಾಗಳು. ಇದೇ ಕಾರಣದಿಂದ ಹೊಸಬರ ಹಾಗೂ ಪರಿಚಿತ ಮುಖಗಳ ಸಿನಿಮಾಗಳು ಮಾರ್ಚ್‌ನಲ್ಲಿ ಪರೀಕ್ಷೆ ಆರಂಭಾಗುವ ಮುನ್ನ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಒಮ್ಮೆ ಎಕ್ಸಾಂ ಮುಗಿದ ರಜೆ ಸಿಕ್ಕ ಬಳಿಕ ಸ್ಟಾರ್ ಸಿನಿಮಾಗಳು ಒಂದರ ಹಿಂದೊಂದರಂತೆ ಬರಲಿದ್ದು, ಮತ್ತೆ ಪ್ರೇಕ್ಷಕರ ಹಾಗೂ ಚಿತ್ರಮಂದಿರಗಳ ಕೊರತೆ ಎದುರಾಗುವ ಭಯ ಸಹಜವಾಗಿಯೇ ಇದೆ. ಈ ಕಾರಣದಿಂದ ಫೆಬ್ರವರಿ ಸ್ಯಾಂಡಲ್‌ವುಡ್ ತಿಂಗಳಾಗಲಿದೆ.
ಜ.26ರಿಂದ ನಮ್ದೇ ಹವಾ
ಸ್ಯಾಂಡಲ್‌ವುಡ್ ಮಟ್ಟಿಗೆ ಜನವರಿ ತಿಂಗಳ ಆರಂಭ ಸ್ವಲ್ಪ ಮಂಕಾಗಿರಬಹುದು. ದೊಡ್ಡ ಮಟ್ಟದ ಸಿನಿಮಾಗಳು ಬಿಡುಗಡೆಯಾಗಿಲ್ಲ ಎಂಬ ಬೇಸರ ಇದ್ದೇ ಇದೆ. ಆದರೆ, ಜನವರಿ 26ರಿಂದ ಆರಂಭವಾಗಿ ಮಾರ್ಚ್ ಮೊದಲ ವಾರದವರೆಗೆ ಸ್ಯಾಂಡಲ್ ವುಡ್‌ನಿಂದ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ. ಈಗಾಗಲೇ ಜ.26ಕ್ಕೆ “ಉಪಾಧ್ಯಕ್ಷ’, “ಕೇಸ್ ಆಫ್ ಕೊಂಡಾಣ’, “ಬ್ಯಾಚುಲರ್ ಪಾರ್ಟಿ’ ಸೇರಿದಂತೆ ಇನ್ನೊಂದೆರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಮುಖ್ಯವಾಗಿ ಫೆಬ್ರವರಿ ಪೂರ್ತಿ ಸ್ಯಾಂಡಲ್‌ವುಡ್ ತಿಂಗಳಾಗಲಿದೆ. ಅದಕ್ಕೆ ಕಾರಣ ಬಿಡುಗಡೆಗೆ ಅಣಿಯಾಗಿರುವ ಸಾಲು ಸಾಲು ಸಿನಿಮಾಗಳು. ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್ ಅಖಾಡಕ್ಕೆ ಇಳಿಯೋದೇ ಫೆಬ್ರವರಿ ತಿಂಗಳಿನಿಂದ ಎಂಬಂತಾಗಿದೆ. ಕಳೆದ ವರ್ಷ ಕೂಡಾ ಫೆಬ್ರವರಿಯಲ್ಲಿ 29 ಸಿನಿಮಾ ತೆರೆಕಂಡಿತ್ತು. ಈ ವರ್ಷವೂ ಫೆಬ್ರವರಿಯಲ್ಲಿ ವಾರಕ್ಕೆ ಐದಾರು ಸಿನಿಮಾಗಳಂತೆ ತೆರೆಕಾಣುವ ಸೂಚನೆ ದಟ್ಟವಾಗಿ ಕಾಣುತ್ತಿದೆ.
ರವಿಪ್ರಕಾಶ್ ರೈ