ನವದೆಹಲಿ: ತಮ್ಮ ಹೇಳಿಕೆಗಳು ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿಲ್ಲ ಎಂದು ಭಾನುವಾರ ಪಕ್ಷದಿಂದ ಉಚ್ಛಾಟಿತರಾಗಿರುವ ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್ ಜಿಂದಾಲ್ ಹೇಳಿಕೆ ನೀಡಿದ್ದಾರೆ.
ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ ಆರೋಪದ ಮೇಲೆ ಜಿಂದಾಲ್ ಅವರನ್ನು ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಅವರು ಉಚ್ಚಾಟಿಸಿದ್ದಾರೆ.
ಜೂನ್ 1 ರಂದು ಪ್ರವಾದಿ ಮೊಹಮ್ಮದ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಕ್ಕಾಗಿ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದರು.
ಇದನ್ನೂ ಓದಿ : ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ: ವಕ್ತಾರೆ ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಗ್ಗೆ ನನಗೆ ತಿಳಿದಿಲ್ಲ ಮತ್ತು ರಾಜ್ಯಾಧ್ಯಕ್ಷರಿಂದ ಇನ್ನೂ ಯಾವುದೇ ಪತ್ರ ಬಂದಿಲ್ಲ ಎಂದು ಜಿಂದಾಲ್ ಪಿಟಿಐಗೆ ತಿಳಿಸಿದ್ದು, ಹಿಂದೂ ದೇವತೆಗಳ ಮೇಲೆ ದಾಳಿ ಮಾಡುವ ಮತ್ತು ಅವಮಾನಿಸುವವರಿಗೆ ಪ್ರಶ್ನೆಯನ್ನು ಕೇಳಲು ಟ್ವೀಟ್ ಮಾಡಿದ್ದೆ ಮತ್ತು ಇದು ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವ ಗುರಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾದ ದೂರದರ್ಶನ ಸುದ್ದಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ ನಂತರ ಬಿಜೆಪಿ ಪಕ್ಷದ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.