Advertisement
ಸ್ಥಳಕ್ಕೆ ಇಸ್ರೋದ ಭೂವಿಜ್ಞಾನಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಜೋಡುಪಾಲ ಹಾಗೂ ಎರಡನೇ ಮೊಣ್ಣಂಗೇರಿ ಪ್ರದೇಶಗಳು ಜನವಸತಿಗೆ ಯೋಗ್ಯವಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ನಿರಾಶ್ರಿತರಿಗೆ ಯೋಗ್ಯವಾದ ನಿವೇಶನ ಹುಡುಕುವ ಪ್ರಯತ್ನ ಮಾಡಿತ್ತು. ನಿರಾಶ್ರಿತರಿಗೆ ಮನೆ ಕಟ್ಟಲು ಕೊಡಗು ಸಂಪಾಜೆ ಶಾಲೆಯ ಬಳಿ ಒಂದೂವರೆ ಎಕ್ರೆ ಮತ್ತು ಮದೆನಾಡು ಸಮೀಪದ ಗೋಳಿಕಟ್ಟೆ ಎಂಬಲ್ಲಿ 5 ಎಕ್ರೆ ಜಾಗ ಗುರುತಿಸಲಾಗಿದೆ. ಮೂರು ತಿಂಗಳಿಂದ ಮಾದರಿ ಮನೆಗಳ ನಿರ್ಮಾಣ ಮಾಡಿ, ಪ್ರಯತ್ನ ಮುಂದುವರಿಸಲಾಗಿದೆ. ಆದರೆ. ನಿರಾಶ್ರಿತರ ಕುಟುಂಬಗಳಿಗೆ ಮೊದಲಿಗೆ 3,800 ರೂ., ಸಂಪೂರ್ಣ ಮನೆ ಕಳೆದುಕೊಂಡವರಿಗೆ 1,01,900 ರೂ. ಹಾಗೂ ವಾಸಕ್ಕೆ ಯೋಗ್ಯವಲ್ಲದ ಮನೆಗಳಿಗೆ ಹಾನಿ ಲೆಕ್ಕದಲ್ಲಿ ಪರಿಹಾರ ನೀಡಲಾಗಿದೆ. ಇನ್ನೂ ಕೆಲವರಿಗೆ ಪರಿಹಾರ ಸಿಗಲು ಬಾಕಿ ಇದೆ.
ಈ ಎಲ್ಲ ನೋವುಗಳ ನಡುವೆ ನಿರಾಶ್ರಿತರಿಗೆ ಇನ್ನೊಂದು ಕಹಿ ಸುದ್ದಿ ಲಭ್ಯವಾಗಿದೆ. ದ.ಕ. ಸಂಪಾಜೆ ಮತ್ತು ಕೊಡಗು ಸಂಪಾಜೆಯ ಎರಡು ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಕೊಡಗು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ಸುದ್ದಿ ಹರಡಿದೆ. ಈ ಕುರಿತೂ ಸರಕಾರದಿಂದ ಅಧಿಕೃತ ಮಾಹಿತಿ ಇಲ್ಲ. ಇಲ್ಲಿಯ ನಿರಾಶ್ರಿತರು ಸರಕಾರಿ ಕಚೇರಿ ಒಂದುಳಿದು ಮಿಕ್ಕೆಲ್ಲ ವಾಣಿಜ್ಯ – ವ್ಯವಹಾರಗಳಿಗೆ ಸುಳ್ಯ ತಾಲೂಕು ಕೇಂದ್ರ ಹಾಗೂ ಕಲ್ಲುಗುಂಡಿಯನ್ನೇ ಅವಲಂಬಿಸಿದ್ದಾರೆ. ಎರಡೂ ಪರಿಹಾರ ಕೇಂದ್ರಗಳನ್ನು ಕೊಡಗು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಪ್ರತಿಭಟಿಸುವುದಾಗಿ ನಿರಾಶ್ರಿತರು ಹೇಳುತ್ತಿದ್ದಾರೆ. ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ 24 ಕುಟುಂಬಗಳ 73 ಜನರು ವಾಸವಿದ್ದಾರೆ. ದ.ಕ. ಸಂಪಾಜೆ ಕಲ್ಲುಗುಂಡಿ ಶಾಲೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 11 ಕುಟುಂಬಗಳ 24 ಜನರು ಆಶ್ರಯ ಪಡೆದಿದ್ದಾರೆ. ಅನಾರೋಗ್ಯಪೀಡಿತ 80ರ ಹರೆಯದ ವೃದ್ಧೆಯೊಬ್ಬರು ಇಲ್ಲಿದ್ದಾರೆ.
Related Articles
ಸರಕಾರದಿಂದ ಈ ತನಕ ಯಾವುದೇ ಮಾಹಿತಿ ನಮಗೂ ಬಂದಿಲ್ಲ. ಸರಕಾರ ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಮಾಡಬಹುದು. ನಿರಾಶ್ರಿತರ ಪರಿಹಾರ ಕೇಂದ್ರವನ್ನು ಕೊಡಗು ಜಿಲ್ಲಾ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವ ಬಗ್ಗೆಯೂ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ನಿರಾಶ್ರಿತರು ಚಿಂತೆ ಮಾಡುವ ಅಗತ್ಯ ಇಲ್ಲ.
-ಅವಿನಾಶ್ ಕಡೆಪಳ
ಕಲ್ಲುಗುಂಡಿ ದ.ಕ ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದ ಉಸ್ತುವಾರಿ
Advertisement
ಉಪವಾಸ ಸತ್ಯಾಗ್ರಹಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಚಿಂತೆಯಾಗಿದೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಾಗ ಭರವಸೆ ನೀಡಿ ಹಿಂದಿರುಗುತ್ತಾರೆ. ಆದರೆ ಈ ತನಕ ಸರಕಾರದ ಕಡೆಯಿಂದ ಮನೆ, ನಿವೇಶನ ನೀಡುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಈ ಕಾರಣದಿಂದ ನಾವು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ಮಾತುಕತೆ ನಡೆಸುತ್ತಿದ್ದೇವೆ.
-ಭುವನೇಶ್ವರಿ,
ಜೋಡುಪಾಲ ನಿರಾಶ್ರಿತೆ ತೇಜೇಶ್ವರ್ ಕುಂದಲ್ಪಾಡಿ