Advertisement
ಮಾಸಿಕ 100 ಯುನಿಟ್‌ಗಳಿಗಿಂತ ಹೆಚ್ಚು ಬಳಕೆ ಮಾಡುವ ಗೃಹ ಬಳಕೆದಾರರಿಗೆ ಪ್ರತೀ ಯೂನಿಟ್‌ಗೆ1.10 ರೂ. ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ. ಎ. 1ರಿಂದ ಪರಿಷ್ಕೃತ ದರ ಅನ್ವಯ ಆಗಲಿದೆ. ಮುಂದಿನ ತಿಂಗಳು ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿ ಯಾಗುವುದರಿಂದ ದರ ಪರಿಷ್ಕರಣೆ ಪ್ರಕಟಿಸಲು ಬರುವುದಿಲ್ಲ. ಹಾಗಾಗಿ ಮುಂಚಿತವಾಗಿಯೇ ಆದೇಶ ಹೊರಬಿದ್ದಿದೆ ಎನ್ನಲಾಗಿದೆ.
Related Articles
ಈ ದರ ಇಳಿಕೆ ಲಾಭವು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು (ಎಲ್‌ಟಿ- 5) ಹಾಗೂ ಬೃಹತ್ ಕೈಗಾರಿಕೆ (ಎಚ್‌ಟಿ) ಗ್ರಾಹಕರಿಗೂ ಸಿಗಲಿದೆ. ಎಚ್‌ಟಿ ವಾಣಿಜ್ಯ ಗ್ರಾಹಕರಿಗೆ ಪ್ರತೀ ಯುನಿಟ್‌ಗೆ 1.25 ರೂ. ಹಾಗೂ ಬೇಡಿಕೆ ಶುಲ್ಕವನ್ನು ಪ್ರತೀ ಕಿ.ವ್ಯಾ.ಗೆ 10 ರೂ. ಇಳಿಕೆ ಮಾಡಲಾಗಿದೆ. ಎಚ್‌ಟಿ ಕೈಗಾರಿಕೆಗೆ ಪ್ರತೀ ಯೂನಿಟ್‌ಗೆ 50 ಪೈಸೆ ಹಾಗೂ ಬೇಡಿಕೆ ಶುಲ್ಕವನ್ನು ಪ್ರತೀ ಕಿ.ವ್ಯಾ.ಗೆ 10 ರೂ. ಇಳಿಕೆ ಮಾಡಲಾಗಿದೆ.
Advertisement
ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು 4,863.85 ಕೋಟಿ ಆದಾಯ ಕೊರತೆಯನ್ನು ತೋರಿಸಿದ್ದವು. ಇದನ್ನು ಸರಿದೂಗಿಸಲು ಪ್ರತಿ ಯುನಿಟ್‌ಗೆ ಸರಾಸರಿ 66 ಪೈಸೆ (ಕನಿಷ್ಠ 49 ಪೈಸೆಯಿಂದ ಗರಿಷ್ಠ 1.63 ರೂ.)ಗಳಷ್ಟು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಇದನ್ನು 2022-23ರಲ್ಲಿ ವಾರ್ಷಿಕ ಕಾರ್ಯನಿರ್ವಹಣೆಯಿಂದ ಬಂದ 565.39 ಕೋಟಿ ರೂ. ಹೆಚ್ಚುವರಿ ಆದಾಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿ, ದರ ಏರಿಕೆ ಪ್ರಸ್ತಾವವನ್ನು ಆಯೋಗವು ನಿರಾಕರಿಸಿದೆ.
ಅಂದಹಾಗೆ ಈ ಮೊದಲು ಗೃಹ ಬಳಕೆದಾರರಿಗೆ 0-100 ಮತ್ತು 101ಕ್ಕಿಂತ ಅಧಿಕ ಎಂಬುದಾಗಿ ಎರಡು ಸ್ಲಾéಬ್‌ಗಳನ್ನು ಮಾಡಲಾಗಿತ್ತು. ಈಗ ಅವುಗಳನ್ನೂ ತೆಗೆದುಹಾಕಲಾಗಿದೆ. ಅದೇ ರೀತಿ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನೀಡಲಾಗುತ್ತಿದ್ದ ಪ್ರತೀ ಯುನಿಟ್ 50 ಪೈಸೆ ರಿಯಾಯಿತಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ನವೀಕರಿಸಬಹುದಾದ ಮೂಲ ಗಳಿಂದ ವಿದ್ಯುತ್ ಖರೀದಿ ಮತ್ತು ಬಳಕೆ ಉತ್ತೇಜಿಸಲು ಎಚ್‌ಟಿ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತೀ ಯೂನಿಟ್‌ಗೆ 50 ಪೈಸೆ ಹೆಚ್ಚಿನ ಹಸುರು ದರ ಮುಂದುವರಿಸಲಾಗಿದೆ.
ಗ್ರಾಹಕರ ಮೇಲಿಲ್ಲ ಪಿಂಚಣಿ ಹೊರೆೆ ನಿರೀಕ್ಷೆಯಂತೆ ಕೆಪಿಟಿಸಿಎಲ್ ನೌಕರರ ಪಿಂಚಣಿ ಮತ್ತು ಗ್ರ್ಯಾಚುಯಿಟಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಕೆಇಆರ್‌ಸಿ ನಿರಾಕರಿಸಿದೆ. ಕೆಪಿಟಿಸಿಎಲ್‌ಗೆ ಬರಬೇಕಾದ ಸರಕಾರದ ಭಾಗದ ಪಿಂಚಣಿ ಮತ್ತು ಗ್ರ್ಯಾಚುಯಿಟಿ ಮೊತ್ತ 1,463.23 ಕೋಟಿ ರೂ.ಗಳನ್ನು ಗ್ರಾಹಕರಿಂದ ಪಡೆಯಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಆಯೋಗ ಪರಿಗಣಿಸಿಲ್ಲ. 2008ರಲ್ಲಿ ಮೊದಲ ಬಾರಿಗೆ ವಿದ್ಯುತ್ ದರವನ್ನು ಕೆಇಆರ್‌ಸಿ ಪ್ರತೀ ಯೂನಿಟ್‌ಗೆ ಸರಾಸರಿ 50 ಪೈಸೆ ಕಡಿಮೆ ಮಾಡಿತ್ತು. ಆದರೆ ಆಗ ಎಸ್ಕಾಂಗಳು ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದವು. ಆ ಮೂಲಕ ಜಾರಿಗೊಳಿಸಲು ಅವಕಾಶ ಕೊಡಲಿಲ್ಲ. ಇದಾದ ಅನಂತರ ಮೊದಲ ಬಾರಿಗೆ ದರ ಇಳಿಕೆ ಮಾಡಲಾಗಿದೆ. 2002ರಲ್ಲಿ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಅಸ್ತಿತ್ವಕ್ಕೆ ಬಂದವು.