ಮೈಸೂರು: ತೈಲ ಬೆಲೆ ಹೆಚ್ಚಳದಿಂದಾಗಿ ಬಸ್ ದರ ಏರಿಸುವ ಕುರಿತ ಪ್ರಸ್ತಾವನೆ ನನ್ನ ಮುಂದಿದ್ದರೂ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಉದ್ದೇಶವಿಲ್ಲ ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಉದ್ದೇಶವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಮಾಡುತ್ತೇನೆ ಎಂದರು.
ಪರಿಸರ ಸ್ನೇಹಿ ಹಾಗೂ ಇಂಧನ ಉಳಿತಾಯದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ಬಸ್‌ಗಳನ್ನು ರಸ್ತೆಗಿಳಿಸುವ ಬಗ್ಗೆ ರಾಜ್ಯ ಸರ್ಕಾರ ಆಲೋಚನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊರ ದೇಶಗಳಿಂದ ಪ್ರಸ್ತಾವನೆಗಳು ಬಂದಿವೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ ಶೇ.40:60ರ ಅನುಪಾತದಲ್ಲಿ ಆದಾಯವನ್ನು ನಮಗೆ ಕೊಡುತ್ತಾರೆ. ಬಸ್‌ಗಳನ್ನು ಅವರೇ ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ಅದರ ಸಾಧಕ-ಬಾಧಕ ಕುರಿತು ಸಮಾಲೋಚಿಸಲಾಗುತ್ತಿದೆ ಎಂದರು.
ವಸತಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ದಸರಾಗೆ ಹೆಚ್ಚು ಬಸ್ ಕೇಳಿದ್ದು, ಅವಶ್ಯಕತೆ ಇರುವಷ್ಟು ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದರು. ಇದಕ್ಕೂ ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ, ನಂಜನಗೂಡು ತಾಲೂಕಿನ ಸುತ್ತೂರಿನ ಗದ್ದುಗೆಗೆ ಭೇಟಿ ನೀಡಿ, ಶ್ರೀ ಶಿವರಾತ್ರೇಶ್ವರ ದರ್ಶನ ಪಡೆದರು.
ರಾಜ್ಯದಲ್ಲಿ ಮತ್ತೆರಡು ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತು ನನಗೇನೂ ಗೊತ್ತಿಲ್ಲ. ಯಾರಿಗೆ, ಯಾವಾಗ ಡಿಸಿಎಂ ಹುದ್ದೆ ನೀಡಬೇಕು, ಎಷ್ಟು ಡಿಸಿಎಂ ಹುದ್ದೆ ಇರಬೇಕು ಎನ್ನುವುದು ಸಿಎಂಗೆ ಬಿಟ್ಟಿದ್ದು.
-ಲಕ್ಷ್ಮಣ ಸವದಿ, ಡಿಸಿಎಂ, ಸಾರಿಗೆ ಸಚಿವ