ಶಹಾಪುರ: ಗಂಗನಾಳ ಗ್ರಾಮದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದ್ದರು ಸಹ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಅ ಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇರುವುದನ್ನು ಖಂಡಿಸಿ ಸೋಮವಾರ ಭಾರತೀಯ ಕಿಸಾನ್ ಸಂಘದ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೋಟ್ಯಂತರ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಕೆಲ ಪ್ರಭಾವಿಗಳು ಲೂಟಿ ಹೊಡೆಯುತ್ತಿದ್ದಾರೆ. ಕಾನೂನು ಪಾಲನೆ ಹಾಗೂ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾದ ತಾಲೂಕು ದಂಡಾಧಿ ಕಾರಿ ಮೌನಕ್ಕೆ ಶರಣಾಗಿದ್ದಾರೆ. ಈಗಾಗಲೇ ನಾಗನಟಗಿ ಗ್ರಾಪಂ ವ್ಯಾಪ್ತಿಯ ಗಂಗನಾಳ ಗ್ರಾಮದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಗ್ರಾಪಂ ವತಿಯಿಂದ ಯಾವುದೇ ಪರವಾನಗಿ ನೀಡಿಲ್ಲ ಎಂದು ಪಿಡಿಒ ವಸಂತ ಪವಾರ ತಿಳಿಸಿದ್ದಾರೆ.
ಈ ಅಕ್ರಮ ಗ್ರಾನೈಟ್ ಧಂದೆ ಕುರಿತು ಮಾತನಾಡಲು ಗ್ರಾಮಸ್ಥರಲ್ಲಿ ಆತಂಕವಿದೆ. ಗ್ರಾಮದಲ್ಲಿ ಕೆಲ ಬಾಡಿಗೆ ಗುಂಡಾಗಳು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸಿದರು.
ಗಣಿಗಾರಿಕೆಯಿಂದ ಸಾರ್ವಜನಿಕ ಸಂಪತ್ತು ಕರಗಿ ಹೋಗುತ್ತಿದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ. ರೈತರ ಜಮೀನು ಹಾಳಾಗಿವೆ. ಕಲ್ಲಿನ ಸ್ಫೋಟದಿಂದ ಭೂಮಿ ಕಂಪಿಸಿ ಮನೆ ಜಖಂ ಆಗಿವೆ. ಕಾಲುವೆ, ರಸ್ತೆ ಹಾನಿ ಆಗಿವೆ. ಗ್ರಾಮದಲ್ಲಿ ಇದರಿಂದ ಭಯದ ವಾತಾವರಣ ಉಂಟಾಗಿದೆ. ಕಾರಣ ತಕ್ಷಣ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಕಾರ್ಯದರ್ಶಿ ಪ್ರವೀಣ ಗುಡಗುಂಟಿ, ಶಾಂತಗೌಡ ದಿಗ್ಗಿ, ಗುರುನಾಥರಡ್ಡಿ ಆಲ್ದಾಳ, ಸೋಮಶೇಖರ ಸುಲ್ತಾನಪುರ, ತಿಮ್ಮಯ್ಯ ಸೈದಾಪುರ, ಸುಭಾಸ ದೊಡ್ಮನಿ, ನಾಗಪ್ಪ ಸಿಂಗನಹಳ್ಳಿ ಇದ್ದರು.