ಲಂಡನ್: ಇಂಗ್ಲಂಡ್ ಪುರುಷರ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ಆದರೆ ಈ ಬಾರಿ ಜೋ ರೂಟ್ ಪಡೆ ಇನ್ನೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಇಂಗ್ಲಂಡ್ ಕ್ರಿಕೆಟಿಗರು ಈ ಬಾರಿಯ ತಮ್ಮ ಲಂಕಾ ಪ್ರವಾಸದ ಸಂದರ್ಭದಲ್ಲಿ ಪರಸ್ಪರ ಕೈ ಕುಲುಕಿಕೊಳ್ಳುವುದಿಲ್ಲ, ಬದಲಾಗಿ ‘ಮುಷ್ಟಿ ಗುದ್ದು’ (ಫಿಸ್ಟ್ ಬಂಪ್) ನೀಡುತ್ತಾರೆ.
ಪರಸ್ಪರ ಕೈಕುಲುಕಿಕೊಳ್ಳಲು ಇಂಗ್ಲಂಡ್ ಕ್ರಿಕೆಟಿಗರಿಗೆ ಇರುವ ಭಯ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ನದ್ದು. ಎರಡು ಟೆಸ್ಟ್ ಪಂದ್ಯಗಳನ್ನಾಡಲು ಶ್ರಿಲಂಕಾಗೆ ಹೊರಡುವ ಮುನ್ನ ಇಂಗ್ಲಂಡ್ ತಂಡದ ನಾಯಕ ಜೋ ರೂಟ್ ಹೀಗೊಂದು ಹೇಳಿಕೆಯನ್ನು ನೀಡಿದ್ದಾರೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಇತ್ತೀಚೆಗಷ್ಟೇ ಇಂಗ್ಲಂಡ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮೊದಲನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಹಲವು ಆಂಗ್ಲ ಆಟಗಾರರು ಕರುಳು ಸಂಬಂಧಿತ ಸಮಸ್ಯೆ ಮತ್ತು ಫ್ಲ್ಯೂ ಜ್ವರದ ಸಮಸ್ಯೆಗೆ ಒಳಗಾಗಿದ್ದರು.
ಹಾಗಾಗಿ ಈ ಬೆಳವಣಿಗೆಯ ನಂತರ ಇಂಗ್ಲಂಡ್ ತಂಡದ ಆಟಗಾರರು ತಮ್ಮಲ್ಲಿ ಕನಿಷ್ಟ ಸಂಪರ್ಕವನ್ನು ಸಾಧಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮತ್ತು ಮೈದಾನದಲ್ಲಿ ಆಟಗಾರರು ಕನಿಷ್ಟ ಸಂಪರ್ಕವನ್ನು ಇರಿಸಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಪರಸ್ಪರ ಹರಡುವುದರಿಂದ ಪಾರಾಗಬಹುದು ಎಂದು ಇವರ ವೈದ್ಯಕೀಯ ತಂಡ ಸಲಹೆ ಮಾಡಿದೆ.
ಹಾಗಾಗಿ ನಾವು ಮೈದಾನದಲ್ಲಿ ಪರಸ್ಪರ ಕೈಕುಲುಕುವುದಿಲ್ಲ ಬದಲಾಗಿ ಮುಷ್ಟಿ ಗುದ್ದನ್ನು ನೀಡಿಕೊಳ್ಳುತ್ತೇವೆ ಹಾಗೂ ನಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುತ್ತೇವೆ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಜೆಲ್ ಗಳನ್ನು ಬಳಸುತ್ತೇವೆ ಎಂದು ಜೋ ರೂಟ್ ಅವರು ಕೊರೋನಾ ವೈರಸ್ ವಿರುದ್ಧ ತಮ್ಮ ತಂಡ ವಹಿಸುತ್ತಿರುವ ಕಾಳಜಿ ಕುರಿತಾಗಿ ಮಾಹಿತಿ ನೀಡಿದರು.
ಲಂಕಾ ಪ್ರವಾಸದಲ್ಲಿ ಇಂಗ್ಲಂಡ್ ತಂಡವು ಶ್ರೀಲಂಕಾ ಬೋರ್ಡ್ ಪ್ರೆಸಿಡೆಂಟ್ಸ್ ಇಲೆವೆನ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಬಳಿಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.