ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣದ ಅವಶ್ಯಕತೆಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಸರ್ಕಾರ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಖರ್ಚು ಮಾಡುವ ಹಣವನ್ನು ಸುಮನಹಳ್ಳಿಯಲ್ಲಿ ನೀಡಲಾಗಿರುವ ಐದು ಎಕರೆ ಜಮೀನಿನಲ್ಲಿ ಒಂದು ಕೆಂಪೇಗೌಡ ಕೇಂದ್ರ, ವಸ್ತು ಸಂಗ್ರಹಾಲಯ, ಅಧ್ಯಯನ ಸಂಸ್ಥೆ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲು ಬಳಸುವಂತೆ ಮನವಿ ಮಾಡಿದ್ದಾರೆ.
ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನೀಲ್ದಾಣದ ವ್ಯಾಪ್ತಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಿಸಲು ಹೊರಟಿರುವುದು ಸಂತಸದ ವಿಚಾರ. ಇದಕ್ಕೆ ತಮ್ಮ ಬೆಂಬಲವೂ ಇದೆ. ಆದರೆ, ಇದಕ್ಕೆ ಸರ್ಕಾರ ಹಣ ನೀಡುವ ಅವಶ್ಯಕತೆ ಇಲ್ಲವೆನ್ನುವುದು ನನ್ನ ಅಭಿಪ್ರಾಯವಾಗಿದೆ. ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಬಹಳಷ್ಟು ಸಹಕಾರ ನೀಡಿದೆ ಮತ್ತು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. ಆದ್ದರಿಂದ ಈ ಬೃಹತ್ ಪ್ರತಿಮೆಗೆ ಅವಶ್ಯಕವಿರುವ ಹಣವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯೇ ಭರಿಸಬೇಕು. ಆ ಮೂಲಕ ಸರ್ಕಾರ ಮಾಡಿದ ಸಹಾಯಕ್ಕೆ ವಿಮಾನ ನಿಲ್ದಾಣ ತನ್ನ ಕಿರು ಕಾಣಿಕೆ ನೀಡಿದಂತಾಗುತ್ತದೆ ಎಂದು ಶಿವಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.