Advertisement

ಅಮೆರಿಕ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಬೇಡ

09:04 PM Feb 24, 2020 | Lakshmi GovindaRaj |

ಮೈಸೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಭೇಟಿ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತಸಂಘ, ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತ ಮತ್ತು ಕಾರ್ಮಿಕ ಮುಖಂಡರು, ಕೇಂದ್ರ ಸರ್ಕಾರ‌ದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹೊಸ ಒಪ್ಪಂದಕ್ಕೆ ಸಹಿ ಬೇಡ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭಾರತಕ್ಕೆ ಆಹ್ವಾನಿಸಿ ಹೈನುಗಾರಿಕೆ, ಕುಕ್ಕುಟೋದ್ಯಮ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿದೆ. ಭಾರತದ ರೈತರ ಪ್ರತಿಭಟನೆಗಳಿಗೆ ಮಣಿದು ಆರ್‌ಸಿಪಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದ ಬಿಜೆಪಿ ಸರ್ಕಾರ, ಈಗ ಆರ್‌ಸಿಪಿಗಿಂತ ಆಘಾತಕಾರಿ ಪರಿಣಾಮ ಉಂಟು ಮಾಡುವ ಹೊಸ ಒಪ್ಪಂದಕ್ಕೆ ಸಹಿ ಹಾಕುತ್ತಿದೆ.

ಭಾರತದಲ್ಲಿ ಸುಮಾರು 10 ಕೋಟಿ ರೈತಾಪಿ ಕುಟುಂಬಗಳಿಗೆ ಹೈನುಗಾರಿಕೆ ಜೀವನೋಪಾಯವಾಗಿದೆ. ಅನೇಕ ವರ್ಷಗಳಿಂದ ಸಹಕಾರ ಜಾಲದ ಮೂಲಕ ಕಟ್ಟಿ ಬೆಳೆಸಿದ ಹೈನುಗಾರಿಕೆ ಉದ್ಯಮದಲ್ಲಿ ಹಾಲಿನ ಬೆಲೆಯ ಶೇ.71ರಷ್ಟು ಹಣ ರೈತಾಪಿ ಕುಟುಂಬಗಳಿಗೆ ದೊರೆಯುತ್ತಿದೆ. ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲಿನ ಶೇ.64ರಷ್ಟು ತೆರಿಗೆ ಕಡಿತಗೊಳಿಸಿದರೆ ಭಾರತದ ಹಾಲಿನ ಆಂತರಿಕ ಮಾರುಕಟ್ಟೆ ನೆಲಕಚ್ಚಲಿದೆ.

ಭಾರತದಲ್ಲಿ ಕುಕ್ಕುಟೋದ್ಯಮ ಸುಮಾರು 48 ದಶಲಕ್ಷ ಜನರ ಜೀವನೋಪಾಯವಾಗಿದೆ. ಈ ವಲಯದ ಸಂಘಟಿತ ಮತ್ತು ಅಸಂಘಟಿತ ರೂಪದ ಆದಾಯ ಸುಮಾರು 80 ಸಾವಿರ ಕೋಟಿ ರೂ. ಈಗ ಅಮೆರಿಕದಿಂದ ಕಡಿಮೆ ದರದ ಕುಕ್ಕುಟ ಉತ್ಪನ್ನಗಳು ಭಾರತವನ್ನು ಪ್ರವೇಶಿಸಿದರೆ ಭಾರತದ ಆಂತರಿಕ ಕುಕ್ಕುಟ ಮಾರುಕಟ್ಟೆಗೆ ಮರಣಶಾಸನ ಬರೆದಂತೆ. ಈ ಮೂಲಕ ಸಣ್ಣ ಮತ್ತು ಮಧ್ಯಮ ರೈತರು ಹಾಗೂ ವ್ಯಾಪಾರಿಗಳು ಕಾರ್ಮಿಕರು ತೊಂದರೆಗೆ ಒಳಗಾಗುತ್ತಾರೆ ಎಂದು ದೂರಿದರು.

ಅಮೆರಿಕ ಹುನ್ನಾರ: ಅಮೆರಿಕದ ತೀವ್ರ ಒತ್ತಡಕ್ಕೆ ಮಣಿದು ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೃಷಿಯಲ್ಲಿ ತೊಡಗಿರುವ ಶೇ.85ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಚುನಾವಣಾ ವರ್ಷದಲ್ಲಿ ಇರುವ ಟ್ರಂಪ್‌ ಅವರು ಅಮೆರಿಕದಲ್ಲಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

Advertisement

ಅವರ ಈ ಯೋಜನೆಗೆ ಭಾರತದ ಮಾರುಕಟ್ಟೆಯನ್ನು ತೆರೆಯುವ ಮೂಲಕ ನರೇಂದ್ರ ಮೋದಿಯವರು ಸಹಕರಿಸುತ್ತಿದ್ದಾರೆ. ಇದು ಅಮೆರಿಕ ಅತಿ ಹೆಚ್ಚಿನ ಪ್ರಮಾಣದ ಸಬ್ಸಿಡಿ ದರದೊಂದಿಗೆ ಸ್ಪರ್ಧಿಸಲಾಗದೆ ಭಾರತದ ರೈತರನ್ನು ಸಮಸ್ಯೆಗೆ ದೂಡಲಿದೆ. ಜಾಗತಿಕ ಹಣಕಾಸು ಪರಿಸ್ಥಿತಿ ಕುಸಿಯುತ್ತಿರುವ ಸಮಯದಲ್ಲಿ ಭಾರತದಲ್ಲಿ ಈ ಒಪ್ಪಂದ ಜಾರಿಯಾಗುತ್ತಿದೆ.

ಹೀಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹೊಸಕೋಟೆ ಬಸವರಾಜು, ಜಗದೀಶ್‌, ಚಿಕ್ಕಣ್ಣೇಗೌಡ, ಜಿ.ಜಯರಾಂ, ಕೆ.ಬಸವರಾಜು, ಜಿ.ರಾಜೇಂದ್ರ, ಮುಳ್ಳೂರು ಮಹದೇವ್‌, ಚೌಡಮ್ಮ, ಚಂದ್ರಶೇಖರ್‌, ತೋಟಪ್ಪ, ರಾಜಶೇಖರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next