ಕಾಬೂಲ್: ಯಾವುದೇ ಸಂಘಟನೆಯು ಇಸ್ಲಾಂ ಹೆಸರಿನಲ್ಲಿ ಮುಗ್ಧ ಜನರನ್ನು ಕೊಲ್ಲುವುದನ್ನು ನಾವು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಜಬಿಯುಲ್ಲಾ ಮುಜಾಹಿದ್ ಅವರು ಗುರುವಾರ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ 169 ಅಫ್ಘಾನ್ ಮತ್ತು 13 ಯುಎಸ್ ಸೈನಿಕರ ಸಾವಿಗೆ ಕಾರಣವಾಗಿತ್ತು. ಈ ಮಾರಣಾಂತಿಕ ದಾಳಿಯ ಹೊಣೆಯನ್ನು ಐಸಿಸ್-ಕೆ ಹೊತ್ತುಕೊಂಡಿದೆ.
“ಇಸ್ಲಾಂ ಹೆಸರಿನಲ್ಲಿ ಯಾವುದೇ ಗುಂಪು ಯಾವುದೇ ದಾಳಿ ನಡೆಸಲು ಅಥವಾ ಜನರನ್ನು ಕೊಲ್ಲಲು ಅಥವಾ ಯುದ್ಧವನ್ನು ಮಾಡಲು ಯಾವುದೇ ಅವಕಾಶವಿಲ್ಲ. ಅಫ್ಘಾನಿಸ್ತಾನದ ಜನರು, ಒಂದು ರಾಷ್ಟ್ರವಾಗಿ ಶಾಂತಿಯುತ ಜೀವನ ನಡೆಸುವ ಹಕ್ಕನ್ನು ಹೊಂದಿದ್ದಾರೆ, ಮತ್ತು ಈ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.
ಇದನ್ನೂ ಓದಿ:ಬಾಹ್ಯಾಕಾಶ ಕೇಂದ್ರದತ್ತ ಇರುವೆ, ಬೆಣ್ಣೆಹಣ್ಣುಗಳ ಸಂಚಾರ!
ತಾಲಿಬಾನ್ ಚೆಕ್‌ಪೋಸ್ಟ್‌ಗಳು ಮತ್ತು ಗಸ್ತನ್ನು ಮೀರಿ ಕಾಬೂಲ್ ವಿಮಾನ ನಿಲ್ದಾಣವನ್ನು ಐಸಿಸ್-ಕೆ ಆತ್ಮಾಹುತಿ ಬಾಂಬರ್ ಹೇಗೆ ಪ್ರವೇಶಿಸಿದ್ದ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಬಿಯುಲ್ಲಾ ಮುಜಾಹಿದ್, ಅದು ನಮ್ಮ ಕಡೆಯಿಂದಾದ ಭದ್ರತಾ ದೋಶವಲ್ಲ , ಯುಎಸ್ ಸೇನೆಯು ಆ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿತ್ತು ಎಂದರು.
“ನಾವು ಭದ್ರತೆಯ ಬಗ್ಗೆ ಬಹಳ ಸೂಕ್ಷ್ಮವಾಗಿದ್ದೇವೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಣ ಮಾಡುವುದು ಕಷ್ಟವಾಗಿತ್ತು. ಸ್ಫೋಟ ನಡೆದ ಪ್ರದೇಶ ನಮ್ಮದಲ್ಲ, ಅಲ್ಲಿ ಅಮೆರಿಕನ್ನರು ಭದ್ರತೆ ಒದಗಿಸುವ ಕೆಲಸ ಮಾಡುತ್ತಿದ್ದರು” ಎಂದರು.