ಬಳ್ಳಾರಿ: ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಳ್ಳಾರಿಯ ವಿವಿ ಸಂಘದಿಂದ ಕೌಶಲ್ಯ ತರಬೇತಿ ನೀಡಿ ಉದ್ಯೋಗವೂ ಸಿಗುವಂತೆ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ ಹೇಳಿದರು.
ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿನ ಎಚ್‌ಎಸ್ ಕೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ಕೊರೊನಾದ ಬಳಿಕ ವಿಪುಲ ಉದ್ಯೋಗಾವಕಾಶಗಳು ಲಭ್ಯವಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಸಂಘದ ಖಜಾಂಚಿ ಗೋನಾಳ ರಾಜಶೇಖರ ಗೌಡ ಮಾತನಾಡಿ, ಕಾಲೇಜಿನ ಪ್ರಾಧ್ಯಾಪಕ ಹೇಮಂತಕುಮಾರ್ ಅವರ ತಾಂತ್ರಿಕ ಶಿಕ್ಷಣ ಕುರಿತ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಂಘವು ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಕೆಲಸ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ನಾವು ಕೂಡಾ ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಹಿರಿಯರ ಹಾದಿಯಲ್ಲಿ ಸಾಗುತ್ತೀದ್ದೇವೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಚ್. ಎಂ.ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯತೆಯುಳ್ಳ ಮಾನವ ಸಂಪನ್ಮೂಲ ಒದಗಿಸುವುದು ನಮ್ಮ ಉದ್ಯೋಗ ಮೇಳದ ಉದ್ದೇಶ. ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಉದ್ಯೋಗಾಂಕ್ಷಿಗಳು ಬಂದರೂ ಸೂಕ್ತವಾದ ಕೆಲಸವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾವು ಬದ್ದರಾಗಿದ್ದೇವೆ. ವಿದೇಶಗಳಲ್ಲಿ ಕೆಲಸ ಮಾಡುತ್ತೇವೆ ಎಂದರೂ ಅದಕ್ಕೂ ಣ ನಮ್ಮಲ್ಲಿ ಅವಕಾಶವಿದೆ. ನಮ್ಮ ಕಾಲೇಜಿನಿಂದ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಅನೇಕರು ಉದ್ಯೋಗ ಪಡೆದುಕೊಂಡು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಉದ್ಯೋಗ ಮೇಳದಲ್ಲಿ 1000ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗಿಯಾಗಿದ್ದರು. 30 ಕಂಪನಿಗಳು ನೇರವಾಗಿ, ಅಂದರೆ ಭೌತಿಕವಾಗಿ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತಿವೆ. ಇವೆಲ್ಲ ರಾಜ್ಯದ ಪ್ರತಿಷ್ಟಿತ ಕಂಪನಿಗಳಾಗಿದ್ದು ಇಂಥ ಕಂಪನಿಗಳಲ್ಲಿ ಅವಕಾಶ ಸಿಕ್ಕಿದ ಮೇಲೆ ಉತ್ತಮವಾಗಿ ಕೆಲಸ ಮಾಡಿ ಹಾಗೂ ನೀವು ಬೆಳೆಯುವುದರ ಜತೆಗೆ ಕಂಪನಿಯನ್ನೂ ಬೆಳೆಸಿ ಆ ಮೂಲಕ ಆರ್ಥಿಕ ವೃದ್ಧಿಗೆ ಕಾಣಿಕೆ ನೀಡಿ ಎಂದು ಪ್ರಾಚಾರ್ಯ ಡಾ| ವೀರಗಂಗಾಧರ ಸ್ವಾಮಿ ಉದ್ಯೋಗಾಂಕ್ಷಿಗಳಿಗೆ ಕರೆ ನೀಡಿದರು.
ಇದೇ ವೇಳೆ ಸಂಘದ ಅಧ್ಯಕ್ಷ, ಖಜಾಂಚಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರವೀಂದ್ರ ಹಿರೇಮಠ ನಿರೂಪಿಸಿದರು. ಕಲ್ಪನಾ ಪಾಟೀಲ್ ವಂದಿಸಿದರು. ಆಡಳಿತ ಮಂಡಳಿ ಸದಸ್ಯರಾದ ಹಲಕುಂದಿ ವಿಜಯಕುಮಾರ್, ಸಂಗನಕಲ್ಲು ಚಂದ್ರಶೇಖರ, ದಾವಣಗೆರೆ ಜಿ.ಎಂ.ಐ.ಟಿಯ ಉದ್ಯೋಗಾಧಿಕಾರಿ ತೇಜಸ್ವಿ ಕಟ್ಟೀಮನಿ, ಸಾರ್ವಜನಿಕ ಸಂಪರ್ಕಾಧಿಕಾರಿ ವೆಂಕಟೇಶ ಕುಲಕರ್ಣಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು.