Advertisement

ಸಿದ್ಧಲಿಂಗ ಶ್ರೀ ಬಗ್ಗೆ ಮಾತನಾಡಲು ಅರ್ಹತೆಯಿಲ್ಲ

03:44 PM Apr 20, 2022 | Team Udayavani |

ಗದಗ: ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ಏಕತಾ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿ ಲಿಂ|ಸಿದ್ಧಲಿಂಗ ಶ್ರೀಗಳು. ಕನ್ನಡದ ಜಗದ್ಗುರುಗಳು, ಭಾವೈಕ್ಯತೆಯ ಹರಿಕಾರರೆಂದೇ ಜನಜನಿತರಾಗಿದ್ದಾರೆ. ಇಂತಹ ಲಿಂ|ತೋಂಟದ ಸಿದ್ಧಲಿಂಗ ಸ್ವಾಮಿಗಳ ಬಗ್ಗೆ ಮಾತನಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಅರ್ಹತೆಯಿಲ್ಲ ಎಂದು ತೋಂಟದಾರ್ಯ ಮಠದ ಭಕ್ತ ದಾನಯ್ಯ ಗಣಾಚಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತೋಂಟದಾರ್ಯ ಮಠದಲ್ಲಿ ನಡೆದ ಲಿಂ|ತೋಂಟದ ಸಿದ್ಧಲಿಂಗ ಸ್ವಾಮಿಗಳ ಐಕ್ಯ ಮಂಟಪದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗೈಕ್ಯ ತೋಂಟದ ಶ್ರೀಗಳ ಜನ್ಮದಿನವಾದ ಫೆ.21ನ್ನು ಸರ್ಕಾರದಿಂದ ಭಾವೈಕ್ಯತಾ ದಿನವನ್ನಾಗಿ ಆಚರಿಸಲು ಶೀಘ್ರ ಕ್ರಮ ಕೈಕೊಳ್ಳುತ್ತೇವೆ ಎಂದು ಘೋಷಿಸಿರುವುದು ಸ್ವಾಗತಾರ್ಹ ಎಂದರು.

44 ವರ್ಷಗಳ ಕಾಲ ಲಿಂಗೈಕ್ಯ ತೋಂಟದ ಶ್ರೀಗಳು ಶ್ರೀಮಠ ಹಾಗೂ ತಮ್ಮ ಹೃದಯದ ಬಾಗಿಲನ್ನು ಸರ್ವ ಜನಾಂಗಗಳಿಗೆ ಮುಕ್ತವಾಗಿ ತೆರೆದಿಟ್ಟಿದ್ದು ಇಡೀ ನಾಡಿಗೆ ಗೊತ್ತಿದೆ. ಅವರ ಮಾತೃವಾತ್ಸಲ್ಯ, ಅಂತಃಕರಣ, ಸಾಮಾಜಿಕ ಹೋರಾಟ, ಸಾಮಾಜಿಕ ಪರಿವರ್ತನೆಯ ಕಾರ್ಯಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಾಡಿನಲ್ಲಿ ಭಾವೈಕ್ಯತೆ ಸಂಸ್ಕೃತಿಯನ್ನು ಪಸರಿಸಿದ್ದರು. ಅಂಥ ಮಹಾತ್ಮರ ಕುರಿತು ಮಾತನಾಡುವ ನೈತಿಕತೆ ದಿಂಗಾಲೇಶ್ವರರಿಗೆ ಇಲ್ಲ ಎಂದರು.

ಕೊಟ್ರೇಶ ಮೆಣಸಿನಕಾಯಿ ಮಾತನಾಡಿ, ಲಿಂಗೈಕ್ಯ ತೋಂಟದಾರ್ಯ ಶ್ರೀಗಳ ಸಾಮಾಜಿಕ ಕಾರ್ಯವೈಖರಿಯನ್ನು ಗುರುತಿಸಿ ಕೇಂದ್ರ ಸರ್ಕಾರ 2001ರಲ್ಲಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ದೇಶದ ಏಕತಾ ಪ್ರಶಸ್ತಿ ನೀಡಿದೆ. ರಾಜ್ಯ ಸರ್ಕಾರವೂ ಭಾವೈಕ್ಯತೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಮಾನತೆಗಾಗಿ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಿದ್ದು ದಿಂಗಾಲೇಶ್ವರರಿಗೆ ಗೊತ್ತಿಲ್ಲವೇ? ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸುತ್ತಿದ್ದಂತೆ ಅಸಹನೆ, ಅಸಮಾಧಾನ ಯಾಕೆ ಎಂದು ಪ್ರಶ್ನಿಸಿದರು.

ಶೇಖಣ್ಣ ಕವಳಿಕಾಯಿ ಮಾತನಾಡಿ, ತೋಂಟದ ಶ್ರೀಗಳು ಕೈಕೊಂಡ ಭಾವೈಕ್ಯತಾ ಕಾರ್ಯವೈಖರಿ ನಾಡಿನ ಹಿಂದೂ, ಮುಸ್ಲಿಂ, ಕ್ರೆ„ಸ್ತ ಹಾಗೂ ದಲಿತ ಸಮುದಾಯಗಳಿಗೆ ಗೊತ್ತಿದೆ. ಆದರೆ ದಿಂಗಾಲೇಶ್ವರ ಶ್ರೀಗಳಿಗೆ ಗೊತ್ತಿಲ್ಲ. ದಿಂಗಾಲೇಶ್ವರರಿಗೆ ಭಾವೈಕ್ಯತೆ ಬೇಕಾಗಿಲ್ಲ. ಕೋಮು ದ್ವೇಷ, ಅಸೂಯೆ, ಹಣ ಬೇಕಾಗಿದೆ ಎಂದು ಆರೋಪಿಸಿದರು.

Advertisement

ಅಶೋಕ ಬರಗುಂಡಿ ಮಾತನಾಡಿ, ದಿಂಗಾಲೇಶ್ವರ ರೊಬ್ಬ ಸ್ವಯಂಘೋಷಿತ ಸ್ವಾಮೀಜಿಯಾಗಿದ್ದು, ಶಿರಹಟ್ಟಿ ಮಠಕ್ಕೆ ಪೀಠಾಧಿ ಪತಿಗಳಾಗಿರುವುದು ದುರದೃಷ್ಟ. ಅವರ ಹೇಳಿಕೆ ಹೀಗೆಯೇ ಮುಂದುವರಿಸಿದರೆ ದಿಂಗಾಲೇಶ್ವರರ ವಿರುದ್ಧ ರಾಜ್ಯಾದ್ಯಂತ ಬಸವದಳ, ಬಸವ ಕೇಂದ್ರಗಳ ಮೂಲಕ ಶಿರಹಟ್ಟಿ ಮಠದ ಭಕ್ತರೊಂದಿಗೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚಂದ್ರು ಚವ್ಹಾಣ ಮಾತನಾಡಿ, ಯಾವಾಗಲೂ ಗೌರವ, ಸನ್ಮಾನ, ಪುರಸ್ಕಾರಗಳು ಅರ್ಹರನ್ನು ಅರಸಿ ಬರುತ್ತವೆ. ಅವು ಕೇಳಿ ಪಡೆದುಕೊಳ್ಳುವಂಥವಲ್ಲ. ಸರ್ಕಾರ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ದಿಂಗಾಲೇಶ್ವರರನ್ನು ಕೇಳುವ ಅವಶ್ಯಕತೆ ಇಲ್ಲ. ಬಾಲೆಹೊಸೂರು ಮಠದ ಪೀಠಾಧಿಪತಿಗಳಾಗಿದ್ದಾಗ ಯಾವ ಯಾವ ಕೆಲಸಗಳನ್ನು ಮಾಡಿದ್ದೀರಿ? ನಿಮ್ಮ ಮೇಲೆ ಎಷ್ಟು ಪ್ರಕರಣಗಳಿವೆ. ನೀವು ಶಿರಹಟ್ಟಿ ಮಠದ ಪೀಠವನ್ನು ರಾತ್ರೋರಾತ್ರಿ ಭಕ್ತರಿಗೆ ಗೊತ್ತಿಲ್ಲದೇ ಅಲಂಕರಿಸಿದ ತಮ್ಮ ಅಸಹನೆ ಗುಣಗಳು ಎಲ್ಲರಿಗೂ ಗೊತ್ತಿವೆ ಎಂದರು.

ಸಭೆಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ರಾಜು ಕುರಡಗಿ, ವಿ.ಕೆ.ಕರೇಗೌಡ್ರ, ಪ್ರಕಾಶ ಅಸುಂಡಿ, ಎಂ.ಬಿ.ಲಿಂಗದಾಳ, ಸದು ಮದರಿಮಠ, ಎಂ.ಸಿ. ಐಲಿ, ಶೇಖಣ್ಣ ಕಳಸಾಪೂರ, ಎಸ್‌.ಎಸ್‌. ಪಟ್ಟಣಶೆಟ್ಟಿ, ಎಂ.ಎಸ್‌. ಅಂಗಡಿ, ಚನ್ನಯ್ಯ ಹಿರೇಮಠ, ಜಿ.ವಿ. ಹಿರೇಮಠ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next