ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯವು ಇಂದು ರಾಯ್ಪುರದಲ್ಲಿ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಕೊಳ್ಳುವ ಇರಾದೆಯಲ್ಲಿದೆ. ಇದೇ ವೇಳೆ ಕಳೆದ ಪಂದ್ಯ ಗೆದ್ದ ಆಸೀಸ್ ಸರಣಿ ಉಳಿಸಿಕೊಳ್ಳುವ ಯೋಜನೆಯಲ್ಲಿದೆ.
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಆದರೆ ನಿರ್ಣಾಯಕ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ, ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ. ಇದಕ್ಕೆ ಕಾರಣ 2009 ರಿಂದ ವಿದ್ಯುತ್ ಬಿಲ್ ಪಾವತಿಸಲೇ ಇಲ್ಲ.
ಕ್ರೀಡಾಂಗಣಕ್ಕೆ ₹ 3.16 ಕೋಟಿ ಬಿಲ್ ಬಾಕಿ ಇದ್ದು, 5 ವರ್ಷಗಳ ಹಿಂದೆಯೇ ಕ್ರೀಡಾಂಗಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕವನ್ನು ಸ್ಥಾಪಿಸಲಾಗಿದೆ, ಆದರೆ ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ. ಇಂದಿನ ಪಂದ್ಯದ ವೇಳೆ ಫ್ಲಡ್ ಲೈಟ್ ಗಳನ್ನು ಜನರೇಟರ್ ಬಳಸಿ ಉರಿಸಬೇಕಾಗುತ್ತದೆ.
ಇದನ್ನೂ ಓದಿ:ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಮುಸ್ಲಿಂ ವೃದ್ಧನ ಮೇಲೆ ದೌರ್ಜನ್ಯ… ಪ್ರಕರಣ ದಾಖಲು
ಸ್ಟೇಡಿಯಂನ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಿಕೆಟ್ ಸಂಸ್ಥೆಯು ಅರ್ಜಿ ಸಲ್ಲಿಸಿದೆ ಎಂದು ರಾಯ್ಪುರ ಗ್ರಾಮಾಂತರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್‌ವಾಲ್ ಹೇಳಿದ್ದಾರೆ.
2018ರಲ್ಲಿ ಹಾಫ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದು ತಿಳಿದಾಗ ಗಲಾಟೆ ಉಂಟಾಗಿತ್ತು. ನಂತರ 2009 ರಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ ಅದು 3.16 ಕೋಟಿಗೆ ಏರಿದೆ ಎಂದು ಘೋಷಿಸಲಾಯಿತು.
ಕ್ರೀಡಾಂಗಣದ ನಿರ್ಮಾಣದ ನಂತರ, ಅದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಹಸ್ತಾಂತರಿಸಲಾಯಿತು, ಉಳಿದ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಬೇಕಾಗಿತ್ತು. ಎರಡು ಇಲಾಖೆಗಳು ವಿದ್ಯುತ್ ಬಿಲ್ ಪಾವತಿಯಾಗದೆ ಪರಸ್ಪರ ಆರೋಪ ಮಾಡುತ್ತಿವೆ.