Advertisement

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

02:25 AM Apr 19, 2021 | Team Udayavani |

ಹಲವು ರಾಜಕಾಲುವೆಗಳನ್ನು ಅತಿಕ್ರಮಿಸಲಾಗಿದೆ ಇಲ್ಲವೇ ಹೂಳು ತುಂಬಿ ಹಾಳಾಗಿದೆ. ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಅಂದ ಮೇಲೆ ಮಳೆ ನೀರು ನಿಂತು ನೆರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಈಗಲೇ ಪಟ್ಟಣ ಪಂಚಾಯತ್‌ ಕಂದಾಯ ಇಲಾಖೆಯ ಸಹಾಯ ಪಡೆದು ಸರ್ವೇ ನಡೆಸಿ, ಪ್ರಮುಖ ರಾಜಕಾಲುವೆಗಳನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸಿ, ಕಿರುತೋಡುಗಳು, ಚರಂಡಿಗಳನ್ನು ಸುಸಜ್ಜಿತಗೊಳಿಸಬೇಕು. ಅದೇ ಜಾಣತನದ ಪ್ರದರ್ಶನ.

Advertisement

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿ ಯಲ್ಲಿ ಪ್ರತಿ ಮಳೆಗಾಲದಲ್ಲೂ ಒಂದಷ್ಟು ಪ್ರದೇಶಗಳಲ್ಲಿ ನೆರೆ ಸಮಸ್ಯೆ ಉದ್ಭವಿಸುವುದು ಹೊಸ ಸಂಗತಿಯಲ್ಲ. ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಪಂಚಾಯತ್‌ ಆಡಳಿತ ಕ್ರಿಯಾಶೀಲವಾಗಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿದೆ.

ಮಳೆ ನೀರು ಹರಿದುಹೋಗಲು ಇದ್ದ ರಾಜಕಾಲುವೆಗಳು ಒತ್ತುವರಿಯಾದರೂ ಅದನ್ನು ತೆರವುಗೊಳಿಸಿ ಸರಿಪಡಿಸುವಲ್ಲಿ ಪಂಚಾಯತ್‌ ಆಡಳಿತಕ್ಕೆ ಆಸಕ್ತಿ ಇಲ್ಲ ಎಂಬುದು ಮತ್ತೂಂದು ಆಪಾದನೆ. ಅಲ್ಪಸ್ವಲ್ಪ ಇರುವ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಪ್ರತಿ ವರ್ಷ ತೆಗೆದು ಸುಸಜ್ಜಿತಗೊಳಿಸಲೂ ಆಸಕ್ತಿ ತೋರಿ ಸುತ್ತಿಲ್ಲ ಎಂಬುದು ಮತ್ತೂಂದು ಟೀಕೆ.

ಕೃಷಿ ಬೆಳೆಗಳು ನಾಶ
ಪ.ಪಂ. ವ್ಯಾಪ್ತಿಯಲ್ಲಿ ಸುಮಾರು 30-40 ವರ್ಷದ ಹಿಂದೆ ಪ್ರತಿ ಗ್ರಾಮಗಳಲ್ಲಿ ಹಲವು ರಾಜಕಾಲುವೆಗಳಿದ್ದವು. ಇದರ ಮೂಲಕ ಮಳೆಗಾಲದಲ್ಲಿ ನೀರು ಸರಾಗ ವಾಗಿ ಹರಿದು ದೊಡ್ಡ ಹೊಳೆಗಳನ್ನು ಸೇರುತ್ತಿತ್ತು. ಆದರೆ ಇದೀಗ ಇವೆಲ್ಲ ಒತ್ತುವರಿ ಯಾಗಿದ್ದು ಹಲವೆಡೆ ಚರಂಡಿ ಗಿಂತಲೂ ಚಿಕ್ಕದಾಗಿವೆ. ಹೀಗಾಗಿ ಮಳೆ ನೀರು ಗದ್ದೆಗಳಿಗೆ ನುಗ್ಗಿ ಕೃಷಿ ಬೆಳೆಗಳು ನಾಶವಾಗುತ್ತಿವೆ. ಆದರೆ ರಾಜಕಾಲುವೆಗಳನ್ನು ಸರಿಪಡಿಸಿ ನೆರೆ ಸಮಸ್ಯೆ ಸರಿಪಡಿಸುವತ್ತ ಪಂಚಾಯತ್‌ ಆಡಳಿತ ತಲೆಕೆಡಿಸಿಕೊಂಡಿಲ್ಲ. ರಾಜ ಕಾಲುವೆಗಳನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸಿ, ಹೂಳೆತ್ತಿ ಅಭಿವೃದ್ಧಿಪಡಿಸುವ ಬಗ್ಗೆ ಇನ್ನಾದರೂ ಆಡಳಿತ ವ್ಯವಸ್ಥೆ ಗಮನ
ಹರಿಸಬೇಕಿದೆ.

ಪ್ರಮುಖ ರಾಜಕಾಲುವೆಗಳೇ ಮಾಯ
ಉದಯವಾಣಿ ರಾಜಕಾಲುವೆಗಳ ಕುರಿತು ಸಮೀಕ್ಷೆ ನಡೆಸಿದಾಗ ಬೆಳಕಿಗೆ ಬಂದ ಸಂಗತಿಯೆಂದರೆ, ಹಲವು ರಾಜಕಾಲುವೆಗಳೇ ಮಾಯವಾಗುತ್ತಿವೆ. 20-25 ಅಡಿ ಅಗಲದ ಕಾಲುವೆಗಳು ನಾಲ್ಕೈದು ಅಡಿಗಳಿಗೆ ಕಿರಿದಾಗಿದೆ. ಕಾರ್ಕಡ ಚೇಂಪಿನ ಕೆರೆ, ಗೋಳಿಕಟ್ಟೆ, ಕಲ್ಸಂಕ ಮಾರ್ಗ ವಾಗಿ ಬನ್ನಾಡಿ ಹೊಳೆ ಸೆರುವ ರಾಜ ಕಾಲುವೆ, ಗುಂಡ್ಮಿ ದೊಡ್ಮನೆಬೆಟ್ಟು ಸಂಬೋಡ್ಲು ಮೂಲಕ ಪಾರಂಪಳ್ಳಿ ಹೊಳೆ ಸೇರುವುದು ಹಾಗೂ ಸುಹಾಸ್‌ ಮನೆ ಪಕ್ಕದಿಂದ ಪಾರಂಪಳ್ಳಿ ಹೊಳೆ ಸಂಪರ್ಕಿಸು ವುದು ಮತ್ತು ಕಾರ್ಕಡ ಹುಣ್ಸೆ ಅಡಿ, ಮೂಡುಹಡು ಮೂಲಕ ಹಡೋಲು ಸಂಪರ್ಕ, ಕಾರ್ಕಡ ಬಡಾ ಹೋಳಿ, ನಂದಿಕೆರೆ, ಕಡಿದ ಹೆದ್ದಾರಿಯಿಂದ ಕುದ್ರು ಮನೆಯಲ್ಲಿ ಬನ್ನಾಡಿ ಹೊಳೆ ಸೇರುವ ರಾಜಕಾಲುವೆ, ಗೆಂಡೆ ಕೆರೆ- ಚೆರೋಳಿ ಬೆಟ್ಟು ಕಾಲುವೆ, ಹಾಲು ಡೈರಿಯಿಂದ ದೇವಾಡಿಗರಬೆಟ್ಟು ಮೂಲಕ ಕಲ್ಸಂಕ ತೋಡು ಸೇರುವಂಥದ್ದು, ಗುರುನರಸಿಂಹ ಕಲ್ಯಾಣ ಮಂಟಪ ಬಳಿಯಿಂದ ಕೆಳಭಾಗದಲ್ಲಿನ ತೋಡು, ಕಾರ್ಕಡ ನಾೖರಿಕೆರೆ, ಚೇಂಪಿನಬೈಲು ಸೇರು ವಲ್ಲಿನ ತೋಡು, ಪಾರಂಪಳ್ಳಿ, ಕೆಮ್ಮಣ್ಣು ಕೆರೆ ಮುಖ್ಯ ತೋಡು, ಕೋಟ ಮೂಕೈì ರಮ್ಯಪ್ರಿಂಟರ್ಸ್‌ ಬಳಿ ಯಿಂದ ದೊಡ್ಡ ಹೊಳೆ ಸೇರುವ ತೋಡು ಪ್ರಮುಖ ರಾಜಕಾಲುವೆಗಳಾಗಿದ್ದವು. ಈಗ ಇವುಗಳಲ್ಲಿ ಹಲವು ಕಾಣ ಸಿಗುತ್ತಲೇ ಇಲ್ಲ.

Advertisement

ಒಳಚರಂಡಿಯಿಂದ 3 ಮೀಟರ್‌ನಷ್ಟು ಜಾಗವನ್ನು ಬಿಟ್ಟು ಕಟ್ಟಡಗಳನ್ನು ಕಟ್ಟಬೇಕು ಎನ್ನುವ ನಿಯಮವಿದೆ. ಆದರೆ ಇದರ ಪಾಲನೆಯಾಗುತ್ತಿಲ್ಲ. ಬಹುತೇಕ ಕಡೆ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿ ತೋಟ, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮತ್ತೆ ಕೆಲವು ಕಡೆ ಪ.ಪಂ. ವತಿಯಿಂದಲೇ ರಾಜಕಾಲುವೆಗಳನ್ನು ಅತಿ ಕ್ರಮಿಸಿ ರಸ್ತೆ ನಿರ್ಮಿಸಲಾಗಿದೆ. ಕೆಲವೊಂದು ಕಾಲುವೆ ಗಳು ಹೂಳುತುಂಬಿಕೊಂಡು ಅಸ್ತಿತ್ವ ಕಳೆದುಕೊಂಡಿವೆ.

ಈ ಮಳೆಗಾಲಕ್ಕಾದರೂ ದುರಸ್ತಿಗೊಳ್ಳಲಿ
ಎರಡು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಮತ್ತೆ ನೆರೆ ಸಮಸ್ಯೆ ತಲೆದೋರಬಹುದು. ಈ ಹಿನ್ನೆಲೆಯಲ್ಲಿ ಕೂಡಲೇ ಪಂಚಾಯತ್‌ ಆಡಳಿತವು ರಾಜಕಾಲುವೆಯನ್ನು ತೆರವುಗೊಳಿಸಲು ಕ್ರಿಯಾಶೀಲ ವಾಗಬೇಕು. ಉಳಿದ ರಾಜಕಾಲುವೆಗಳ ಹೂಳು ತೆಗೆದು ಸರಿಪಡಿಸಬೇಕು. ಆಗ ಶೇ. 50 ರಷ್ಟಾದರೂ ಸಮಸ್ಯೆಯನ್ನು ನಿರ್ವಹಿಸಬಹುದು. ಇಲ್ಲವಾದರೆ ನೆರೆ ಸಮಸ್ಯೆಗೆ ಮುಳುಗಿ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮವನ್ನು ಆರಂಭಿಸಬೇಕಾದೀತು.

ಆಡಳಿತ ವ್ಯವಸ್ಥೆಯ ಗಂಭೀರ ಮೌನ
ಪ.ಪಂ. ವ್ಯಾಪ್ತಿಯ ಚೆಲ್ಲೆಮಕ್ಕಿ, ಸಾಲಿಗ್ರಾಮ ದೇವಾಡಿಗರಬೆಟ್ಟು, ಪಾರಂಪಳ್ಳಿ, ಕಾರ್ಕಡ ಬಡಹೋಳಿ, ಗುಂಡ್ಮಿ, ಹೆಗ್ಗಡ್ತಿ ಓಣಿಯಲ್ಲಿ ನೆರೆ ಸಮಸ್ಯೆ ಇದ್ದದ್ದೇ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಪ್ರಮುಖ ಹೊಳೆಗಳನ್ನು ಸಂಪರ್ಕಿಸುವ ರಾಜ ಕಾಲುವೆಗಳು ಒತ್ತುವರಿಯಾಗಿರುವುದು, ಇರುವ ರಾಜ ಕಾಲುವೆಗಳಲ್ಲೂ ಹೂಳುತುಂಬಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ಮಳೆಗಾಲ ಬಂದಾಗ ತಾತ್ಕಾಲಿಕ ಪರಿಹಾರದತ್ತ ಗಮನಹರಿಸುವ ಪಟ್ಟಣ ಪಂಚಾಯತ್‌ ಆಮೇಲೆ ಗಂಭೀರ ಮೌನ ವಹಿಸುವುದೇ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next