Advertisement

ಚಿಂತನಾ ಮಟ್ಟದಲ್ಲೇ ಡ್ರೆಸ್‌ ಕೋಡ್‌ ಬ್ರೇಕ್‌

06:05 AM Oct 08, 2017 | |

ಬೆಂಗಳೂರು: ರಾಜ್ಯ ಮುಜರಾಯಿ ದೇವಸ್ಥಾನಗಳಲ್ಲಿ ಡ್ರೆಸ್‌ ಕೋಡ್‌ ಜಾರಿಗೊಳಿಸಬೇಕೆಂಬ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ.

Advertisement

ಶನಿವಾರ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲಿಯೂ ಮುಜರಾಯಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಡ್ರೆಸ್‌ ಕೋಡ್‌ ಮಾಡಬೇಕೆಂದು ಧಾರ್ಮಿಕ ಪರಿಷತ್‌ ಸದಸ್ಯರು ಸರ್ಕಾರದ ಮುಂದೆ ಪ್ರಸ್ತಾಪ ಸಲ್ಲಿಸಿದ್ದರು.

ಆ ಪ್ರಸ್ತಾಪ ಕುರಿತಂತೆ ಶನಿವಾರ ನಡೆದ ಸಭೆಯಲ್ಲಿ ಚರ್ಚೆಯಾಗಿದ್ದು, ಸರ್ಕಾರಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಡ್ರೆಸ್‌ ಕೋಡ್‌ ನಿರ್ಬಂಧ ಹೇರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಚಿವರೇ ವ್ಯಕ್ತಪಡಿಸಿದ್ದಾರೆ. 

ದೇವಸ್ಥಾನಗಳಿಗೆ ಭೇಟಿ ನೀಡುವುದು ಜನರ ತೀರ್ಮಾನಕ್ಕೆ ಬಿಟ್ಟಿರುವುದು. ಅಲ್ಲದೇ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಇಂತಹುದೇ ಬಟ್ಟೆ ಹಾಕಿಕೊಂಡು ಬರಬೇಕೆಂದು ತಾಕೀತು ಮಾಡಲು ಸಾಧ್ಯವಿಲ್ಲ. ಇದರಿಂದ ಮುಜರಾಯಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಈ ನಿರ್ಧಾರ ಕೈಬಿಡಲಾಗಿದೆ.

ಸರ್ಕಾರ ಡ್ರೆಸ್‌ ಕೋಡ್‌ ಮಾಡಿದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೂ ಮೊದಲು ತಾತ್ಕಾಲಿಕವಾಗಿಯಾದರೂ ಅಗತ್ಯ ಡ್ರೆಸ್‌ನ್ನು ಸರ್ಕಾರವೇ ದೇವಸ್ಥಾನದ ಆಡಳಿತ ಮಂಡಳಿ ಮೂಲಕ ಒದಗಿಸಬೇಕಾಗುತ್ತದೆ. ಹೀಗಾಗಿ ಡ್ರೆಸ್‌ ಕೋಡ್‌ ಜಾರಿಗೊಳಿಸುವುದು ಒಳಿತಲ್ಲ ಎಂದು ಈ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

ದೇವಸ್ಥಾನದ ಸಿಬ್ಬಂದಿಗೆ ಡ್ರೆಸ್‌ ಕೋಡ್‌: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೂ ಡ್ರೆಸ್‌ ಕೋಡ್‌ ಜಾರಿಗೊಳಿಸಲು ಧಾರ್ಮಿಕ ಪರಿಷತ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಹಿಳೆ ಮತ್ತು ಪುರುಷರಿಗೆ ಯಾವ ರೀತಿಯ ಉಡುಪು ಇರಬೇಕು ಎನ್ನುವ ಕುರಿತಂತೆ ಶೀಘ್ರವೇ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ವೇತನ ಹೆಚ್ಚಳಕ್ಕೆ ಸೂಚನೆ: ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗೆ ಸಂಬಳ ಹೆಚ್ಚಳ ಮಾಡುವ ಕುರಿತಂತೆ ತೀರ್ಮಾನವಾಗಿದ್ದರೂ ಅಧಿಕಾರಿಗಳು ಆದೇಶ ಮಾಡದೇ ಮುಚ್ಚಿಟ್ಟಿರುವ ಕುರಿತು ಸಚಿವರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 1997ರ ಮುಜರಾಯಿ ಕಾಯ್ದೆ ಪ್ರಕಾರ ದೇವಸ್ಥಾನಗಳ ಸಿಬ್ಬಂದಿಗೆ ಸಂಬಳ ಹೆಚ್ಚಿಸಲು ಸೂಚನೆ ನೀಡಿದ್ದರೂ ಕೆಲಸ ಮಾಡದ  ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಸೀರೆ ಹಾಗೂ ರವಿಕೆ ಮತ್ತು ಪುರುಷರಿಗೆ ಬಿಳಿ ಶರ್ಟ್‌ ಮತ್ತು ಪಂಚೆ ಡ್ರೆಸ್‌ ಕೋಡ್‌ ಮಾಡಲು ಪ್ರಸ್ತಾಪ ಮಾಡಲಾಗಿತ್ತು. ಮಹಿಳೆಯರು ಜೀನ್ಸ್‌ ಪ್ಯಾಂಟ್‌, ಮಿಡಿ, ಸ್ಕರ್ಟ್‌ ಹಾಕುವುದಕ್ಕೆ ನಿಷೇಧ ಹೇರಬೇಕೆಂಬ ಪ್ರಸ್ತಾಪ ಮಾಡಲಾಗಿತ್ತು.

5 ಕ್ರೈಸ್ತ ಶಾಲೆಗಳ ಅನುದಾನಕ್ಕೂ ಬ್ರೇಕ್‌!
2007 ರಲ್ಲಿ ನಾಗರಾಜ ಶೆಟ್ಟಿ ಮುಜರಾಯಿ ಸಚಿವರಾಗಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಐದು ಕ್ರಿಶ್ಚಿಯನ್‌ ಶಾಲೆಗಳಿಗೆ ಕಟೀಲು ಕನ್ಯಾ ಪರಮೇಶ್ವರಿ ದೇವಸ್ಥಾನದಿಂದ ಅನುದಾನ ನೀಡಲು ತೀರ್ಮಾನ ಕೈಗೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕಲ್ಲಡ್ಕ ಪ್ರಭಾಕರ ಭಟ್‌ ಶಾಲೆಗೆ ಅನುದಾನ ನೀಡಿದ ಮಾದರಿಯಲ್ಲಿಯೇ ಕ್ರಿಶ್ಚಿಯನ್‌ ಶಾಲೆಗಳಿಗೂ ಅನುದಾನ ನೀಡಿರುವುದನ್ನು ಸ್ಥಗಿತಗೊಳಿಸುವಂತೆ 2015 ರಲ್ಲಿಯೇ ಮಂತ್ರಿ ಪರಿಷತ್‌ ಸಭೆಯಲ್ಲಿ ಠರಾವು ಪಾಸ್‌ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರಂತರವಾಗಿ ಅನುದಾನ ನೀಡುತ್ತಿರುವ ವಿಷಯ ಬೆಳಗಕಿಗೆ ಬಂದಿದೆ. ತಕ್ಷಣದಿಂದ ಎಲ್ಲ ಖಾಸಗಿ ಶಾಲೆಗಳಿಗೆ ಮುಜರಾಯಿ ದೇವಸ್ಥಾನದಿಂದ ಹೋಗುತ್ತಿರುವ ಅನುದಾನ ಸ್ಥಗಿತಗೊಳಿಸುವಂತೆ ಸಚಿವರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next