ರೋಣ: ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಅದ್ಭುತ ಜಯ ಸಿಕ್ಕಿದೆ. ದೇಶದಲ್ಲಿ ಒಟ್ಟು 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ದೇಶಾದ್ಯಂತ ಬದಲಾವಣೆ ಪರ್ವ ಪ್ರಾರಂಭವಾಗಿದೆ. ದೇಶ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಇತ್ತೀಚೆಗೆ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಹಲವು ಮುಖಂಡರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತ ಜನರು ಬದಲಾವಣೆ ಬಯಸುತ್ತಿದ್ದಾರೆ. ಆ ದಿಸೆಯಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ
ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ನಮ್ಮ ಪಕ್ಷವನ್ನು ಬಲಪಡಿಸಿದ್ದಾರೆ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿ ಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ಕೈಗೊಳ್ಳುವ ಮೂಲಕ ಜನರಲ್ಲಿ ಮೋದಿ ಸರ್ಕಾರ ಹಾಗೂ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಮಾತನಾಡಿದರು. ವಿರೂಪಾಕ್ಷಪ್ಪ ಉಣಚಗೇರಿ ಹಾಗೂ ಸಹೋದರರು ಬಿಜೆಪಿಗೆ
ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸಂಗಣ್ಣ ಮುದುಗಲ್ಲ, ಕೆ.ಆರ್. ನಾಲವಾಡದ, ಬಸವರಾಜ ಕೊಟಗಿ, ವೀರಭದ್ರಪ್ಪ ನವಲಗುಂದ, ಬಸಪ್ಪ ಪಲ್ಲೇದ, ಕೊಟ್ರಪ್ಪ ದೇಸಾಯಿ, ಲೋಕೇಶ ಭಗವತಿ, ಬಸವರಾಜ ನಾಲವಾಡದ ಇದ್ದರು.