Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ. ಮೈತ್ರಿ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾವಿಸಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ, ಗೆದ್ದ-ಸೋತ ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿರುವುದಾಗಿ ಅವರು ಹೇಳಿದರು.
ರಾಷ್ಟ್ರ ರಾಜಕಾರಣದ ಬಗ್ಗೆ ಒಲವು ಹೊಂದಿದ್ದೀರಾ ಎಂಬ ಪ್ರಶ್ನೆಗೆ, ನನಗೆ ರಾಷ್ಟ್ರ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ. ನಂದುಬಿಡಿ, ಹಾಲಿ ಸಂಸದರ ಕಥೆಯೇ ಕೇಳಿ. ಅಂಥವರೇ ಚುನಾವಣೆ ಬೇಡ ಅಂತ ಹೇಳುತ್ತಿರುವಾಗ ನಮ್ಮದೆಲ್ಲ ಯಾವ ಲೆಕ್ಕ ಎಂದು ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಸ್ತಾವಿಸದೇ ಎಚ್‌ಡಿಕೆ ಟಾಂಗ್ ಕೊಟ್ಟರು. ಕಾಂಗ್ರೆಸ್ ವಿರುದ್ಧ 640 ಕೋಟಿ ರೂ. ಭ್ರಷ್ಟಾಚಾರ ಆರೋಪ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಲಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನೀವು (ಕಾಂಗ್ರೆಸ್ ನಾಯಕರು) ಬಿಜೆಪಿ ವಿರುದ್ಧ 40 ಪರ್ಸೆಂಟ್ ಅಂತ ಡಂಗುರ ಹೊಡೆದ್ರಲ್ಲ, ಆಗ ಯಾವ ಸಾಕ್ಷಿ ಇಟ್ಟಿದ್ರಿ? ಅವನ್ಯಾರೋ ಗುತ್ತಿಗೆದಾರ ದೂರು ಕೊಟ್ರಲ್ಲ, ಅವರು ಸಾಕ್ಷಿ ಇಟ್ಟಿದ್ರಾ ಎಂದು ಪ್ರಶ್ನಿಸಿದರು. ಈಗ ಅಧಿಕಾರದಲ್ಲಿದ್ದೀರಲ್ಲ, ಅದರ ಬಗ್ಗೆ ತನಿಖೆ ಮಾಡಿಸಿ ಎಂದು ವಾಗ್ಧಾಳಿ ನಡೆಸಿದರು.