ದೇವನಹಳ್ಳಿ/ಬೆಂಗಳೂರು: ಇಂಗ್ಲೆಂಡ್‌ನಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಭಾನುವಾರ 289 ಮಂದಿ ಆಗಮಿಸಿದ್ದು, ಎಲ್ಲರಿಗೂ ಕಡ್ಡಾಯ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದೆ. ಯಾವೊಬ್ಬರಲ್ಲೂ ಸೋಂಕು ದೃಢಪಟ್ಟಿಲ್ಲ. ಬ್ರಿಟನ್ ರೂಪಾಂತರದಿಂದ ಬಂದ್ ಆಗಿದ್ದ ವಿಮಾನ ಞಸಂಚಾರ ಎರಡು ವಾರಗಳ ನಂತರ ಆರಂಭಗೊಂಡಿದೆ.
ತಾಲೂಕಿನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬೆಳಗಿನ ಜಾವ 4ಕ್ಕೆ ಆಗಮಿಸಿತು. ಸಿಬ್ಬಂದಿ ಸೇರಿದಂತೆ ಒಟ್ಟು 289 ಮಂದಿ ಆಗಮಿಸಿದ್ದು, ಆರೋಗ್ಯ ಇಲಾಖೆ ಸೂಚನೆಯಂತೆ ಕಡ್ಡಾಯ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಆರಂಭದಲ್ಲಿ ಕೆಲವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೂ, ಸೋಂಕು ಪರೀಕ್ಷೆಯಲ್ಲಿ ಯಾರಲ್ಲೂ ಸೋಂಕು ದೃಢಪಟ್ಟಿಲ್ಲ.
289 ಮಂದಿಯಲ್ಲಿ 145 ಪುರುಷರು, 96 ಮಹಿಳೆಯರು, 32 ಮಕ್ಕಳು ಹಾಗೂ 16 ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಈ ಪ್ರಯಾಣಿಕರಿಗಾಗಿಯೇ ಪ್ರತ್ಯೇಕ ಸ್ಥಳವನ್ನು ನಿಯೋಜಿಸಲಾಗಿತ್ತು. ಆರಂಭದಲ್ಲಿ ನಿಲ್ದಾಣದ ಸಿಬ್ಬಂದಿ ಥರ್ಮಲ್‌ಸ್ಟ್ರೀನಿಂಗ್ ಪರೀಕ್ಷೆ ನಡೆಸಿದರು. ಈ ಎಲ್ಲಾ ಪ್ರಯಾಣಿಕರ ಕೈಗೂ ಮುಂದ್ರೆ ಹಾಕಲಾಗಿದೆ. ಈ ಮುದ್ರೆಯಲ್ಲಿ ಯುಕೆ ಪ್ರಯಾಣಿಕರು, ಯಾವಾಗ ರಾಜ್ಯಕ್ಕೆ ಆಗಮಿಸಿದ್ದಾರೆ ಎಂಬುದನ್ನು ನಮೂದಿಸಲಾಗಿದೆ.
ಸಿಮ್ ಕಾರ್ಡ್ ವ್ಯವಸ್ಥೆ: ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕ ಬಳಿ ಸ್ಥಳೀಯ ಮೊಬೈಲ್ ನಂಬರ್ ಇರಲಿಲ್ಲ. ಇದರಿಂದ ಸೋಂಕು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂಬರ್ ಇಲ್ಲದೆ ಆರಂಭದಲ್ಲಿ ಸಮಸ್ಯೆ ಎದುರಾಗಿತ್ತು. ಅಲ್ಲದೆ,ಆರೋಗ್ಯ ಇಲಾಖೆಗೂ ಕೂಡಾ ಭವಿಷ್ಯದಲ್ಲಿ ಸಂಪರ್ಕ ಕಷ್ಟ ಸಾಧ್ಯವಾಗುತ್ತಿತ್ತು. ಈ ಹಿನ್ನೆಲೆ ಆರೋಗ್ಯ ಸಚಿವರು ಸ್ಥಳೀಯ ಏಜೆನ್ಸಿಯೊಂದಿಗೆ ಮಾತನಾಡಿ ಹೊಸ ಸಿಮ್‌ಕಾರ್ಡ್ ವ್ಯವಸ್ಥೆ ಮಾಡಿದ್ದರು.
ಮೊದಲು ಪಾಸಿಟಿವ್ ಆನಂತರ ನೆಗೆಟಿವ್ : ಪೂಲ್ ಮಾದರಿ ಪರೀಕ್ಷೆಯಲ್ಲಿ ನಾಲ್ವರದಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, ಆನಂತರ ನಡೆಸಿದ ಪ್ರತ್ಯೇಕ ಪರೀಕ್ಷೆಯಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದೆ. ಪೂಲ್ ಮಾದರಿಯಲ್ಲಿ ಅಂದರೆ, ಐದು ಮಂದಿ ಅಥವಾ ನಾಲ್ವರ ಗಂಟಲು ದ್ರವ ಸಂಗ್ರಹಿಸಿ ಒಂದುಗೂಡಿಸಿ ಸೋಂಕು ಪರೀಕ್ಷೆಗೆ ನಡೆಸುವುದು. ಈ ಪರೀಕ್ಷೆಯಲ್ಲಿ ಒಂದು ಪೂಲ್‌ದು (ನಾಲ್ಕು ಮಂದಿ) ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆ ಆ ಎಲ್ಲಾ ಪ್ರಯಾಣಿಕರಿ ಮಾದರಿಯನ್ನು ಪ್ರತ್ಯೇಕವಾಗಿ ಪರೀಕ್ಷೆಗೊಳಪಡಿಸಲಾಗಿದೆ. ಆದರೆ, ಅಂತಿಮವಾಗಿ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪರೀಕ್ಷಾ ವರದಿ ತಡ; ಪ್ರಯಾಣಿಕರು ಗರಂ: ಸೋಂಕು ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರವು ನಾಲ್ಕು ಗಂಟೆಯಲ್ಲಿ ವರದಿ ನೀಡುತ್ತೇವೆ ಎಂದು ಹೇಳಿತ್ತು. ಆದರೆ, ಕೆಲ ಪ್ರಯಾಣಿಕರದ್ದು ಐದಾರು ತಾಸು ಕಳೆದರೂ ವರದಿ ಬಾರಲಿಲ್ಲ. ಮುಂಜಾನೆಯಿಂದಲೇ ಕಾದು ಕಾದು ಸುಸ್ತಾಗಿ ಪ್ರಯಾಣಿಕರು ಮತ್ತು ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೆನ್ನೆಯಷ್ಟೇ, ಆರೋಗ್ಯ ಸಚಿವ ಸುಧಾಕರ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿ ಹೋಗಿದ್ದರು. ಆದರೆ, 5 ಗಂಟೆ ಕಳೆದರೂ ವರದಿ ನೀಡುವಲ್ಲಿ ಅಕಾರಿಗಳು ವಿಫಲರಾಗಿರುವುದರಿಂದ ಆರೋಗ್ಯ ಸಿಬ್ಬಂದಿ ಜತೆ ಪ್ರಯಾಣಿಕರು ಟರ್ಮಿನಲ್‌ನಲ್ಲಿ ವಾಗ್ವಾದ ನಡೆಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ದ ಬೇಸರವ್ಯಕ್ತಪಡಿಸಿದರು.