ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ವಶದಲ್ಲಿ ಇರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿ ವಾಲ್‌ಗೆ ಮಧ್ಯಾಂತರ ಜಾಮೀನು ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಜತೆಗೆ ಮುಂದಿನ ವಿಚಾರಣೆ ಎ.3ರಂದು ನಿಗದಿಗೊಳಿಸಿದೆ.
ನ್ಯಾ| ಸ್ವರ್ಣಕಾಂತ್ ಶರ್ಮಾ ನೇತೃತ್ವದ ನ್ಯಾಯಪೀಠವು ಮಧ್ಯಾಂತರ ಜಾಮೀನು ನೀಡಲು ನಿರಾಕರಿಸಿದೆ. ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಾಂತರ ಜಾಮೀನು ನೀಡುವುದರ ಕುರಿತು ಎ.2ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆಯೂ ಇ.ಡಿ.ಗೆ ಆದೇಶಿಸಿದೆ.
ಇ.ಡಿ. ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಕೇಜ್ರಿವಾಲ್ ಪರ ವಕೀಲರು ಕೊನೆಗಳಿಗೆಯಲ್ಲಿ ಅರ್ಜಿ ಸಂಬಂಧಿಸಿ ದಂತೆ ನಮಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನಾವು ತತ್‌ಕ್ಷಣದ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವು ಅಂಶ ಗಳನ್ನು ಪರಿಶೀಲಿಸಿ, ಪ್ರತಿಕ್ರಿಯೆ ನೀಡಲು ನಮಗೆ ಸಮಯಬೇಕಿದೆ ಎಂದರು. ಈ ನಡುವೆ ದಿಲ್ಲಿಯ ಹಲವೆಡೆ ಬಿಜೆಪಿ ಮತ್ತು ಆಪ್ ಕಾರ್ಯಕರ್ತರು ಪ್ರತಿಭಟನೆ ಯನ್ನೂ ನಡೆಸಿದ್ದಾರೆ
ದೊಡ್ಡ ಅಂಶ ಬಹಿರಂಗ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಕೋರ್ಟ್‌ನಲ್ಲಿ ದೊಡ್ಡ ಅಂಶವನ್ನು ಬಹಿರಂಗೊಳಿಸ ಲಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
ಜೈಲಿನಿಂದ ರಾಜ್ಯಭಾರ ಸಾಧ್ಯವಿಲ್ಲ: ಸಕ್ಸೇನಾ
ಜೈಲಿನಿಂದಲೇ ಆಡಳಿತಕ್ಕೆ ಸಂಬಂಧಿಸಿದ ಆದೇಶಗಳನ್ನು ಸಿಎಂ ಕೇಜ್ರಿವಾಲ್ ನೀಡುತ್ತಿರುವ ನಡುವೆಯೇ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಜೈಲಿನಿಂದ ರಾಜ್ಯಭಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ “ಜೈಲಿನಿಂದ ಆಡಳಿತ ನಡೆಯುವುದಿಲ್ಲ ಎಂದು ದಿಲ್ಲಿಯ ಜನತೆಗೆ ನಾನು ಭರವಸೆ ನೀಡುತ್ತೇನೆ’ ಎಂದಿದ್ದಾರೆ.