ಪಣಜಿ: ಮಹದಾಯಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ನದಿ ನೀರು ತಿರುವು ಮಾಡದಂತೆ ನದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಗೋವಾ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಹದಾಯಿ ವಿಷಯದಲ್ಲಿಸುಪ್ರೀಂಕೋರ್ಟ್‌ನಲ್ಲಿ ಗೋವಾ ಬಲವಾದ ಕಾನೂನು ಹೋರಾಟ ನಡೆಸುತ್ತಿದೆ’ ಎಂದರು.
ಇನ್ನೊಂದೆಡೆ, ಮಹದಾಯಿ ವಿವಾದದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಬೆನ್ನಲ್ಲೇ ಗೋವಾ ಪ್ರತಿಪಕ್ಷಗಳು ಪ್ರಮೋದ್ ಸಾವಂತ್ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ “ಜನ ಸಂಕಲ್ಪ ಯಾತ್ರೆ’ ಸಮಾರಂಭದಲ್ಲಿ ಅಮಿತ್ ಶಾ, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ವರ್ಷಗಳ ಕರ್ನಾಟಕ-ಗೋವಾ ನಡುವಿನ ಮಹದಾಯಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿದೆ. ಕರ್ನಾಟಕಕ್ಕೆ ಮಹದಾಯಿ ನೀರು ನೀಡಿದ್ದು, ಈ ಮೂಲಕ ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದರು.
ಗೋವಾ ನಿಯೋಗ ಅಮಿತ್ ಶಾ ಅವರನ್ನು ಭೇಟಿಯಾದಾಗ ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಲಾಗುವುದು. ನದಿ ಪಾತ್ರದಲ್ಲೇ ನದಿಯ ನೀರು ಬಳಸಲು ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ನದಿ ನೀರು ತಿರುವಿಗೆ ನಮ್ಮ ತೀವ್ರ ವಿರೋಧವಿದೆ.
– ನೀಲೇಶ್ ಕಬ್ರಾಲ್, ಗೋವಾ ಸಚಿವ