ಉಡುಪಿ: ವಿಧಾನ ಪರಿಷತ್ ಚುನಾವಣೆಗೆ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ನ.17ರೊಳಗೆ ತೀರ್ಮಾನ ತೆಗೆದುಕೊಂಡು, ಒಂದೊಮ್ಮೆ ಸ್ಪರ್ಧಿಸುವುದಾದರೂ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಲಿದ್ದೇನೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಮಂಗಳವಾರ ಡಯಾನಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಒಬ್ಬ ಅಭ್ಯರ್ಥಿಯನ್ನು ಸ್ಪರ್ಧಿಸುವಂತೆ ಜನರು ಒತ್ತಾಯ ಮಾಡುವುದು ಸಹಜ. ಆದರೆ, ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಅಭ್ಯರ್ಥಿಗೆ ಬಿಟ್ಟದ್ದು. ವಿಧಾನ ಪರಿಷತ್ ಚುನಾವಣೆ ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗಿದೆ. ನಾನು ಯಾವುದೇ ಪಕ್ಷದಲ್ಲಿಲ್ಲ. ಎಲ್ಲ ಪಕ್ಷಗಳ ಮಧ್ಯೆ ಇದ್ದೇನೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಆಲೋಚನೆ ಮಾಡಬೇಕಿದೆ ಎಂದರು.
ಚುನಾವಣೆಯಲ್ಲಿ ಗೆಲುವು, ಸೋಲು ಮತದಾರರಿಗೆ ಬಿಟ್ಟಿದ್ದು. ಯಾವುದೇ ಪಕ್ಷದಿಂದ ಆಹ್ವಾನ ಬಂದರೂ, ಹೋಗಬೇಕೇ, ಬೇಡವೇ ಎಂಬುದನ್ನು ಅಭ್ಯರ್ಥಿಗಳೇ ನಿರ್ಧರಿಸುತ್ತಾರೆ. ನಾನು ಯಾವುದೇ ಪಕ್ಷದಿಂದ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ : ತಂಗಡಗಿ
ಎಲ್ಲ ಪಕ್ಷಗಳಲ್ಲೂ ಸಹಕಾರಿಗಳು ಇದ್ದಾರೆ. ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನವೋದಯ ಸ್ವಸಹಾಯ ಸಂಘದ ಸದಸ್ಯರು, ಗ್ರಾ.ಪಂ. ಸದಸ್ಯರು, ಸಹಕಾರಿಗಳು ಒತ್ತಡ ಹೇರುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿರುವ ಶೇ.50ರಷ್ಟು ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ. ಗ್ರಾ.ಪಂ.ನ ಮಹಿಳಾ ಸದಸ್ಯರಲ್ಲಿ ಶೇ.25ರಿಂದ ಶೇ.30ರಷ್ಟು ಸಹಕಾರಿಗಳಿದ್ದಾರೆ. ಹೀಗಾಗಿ ಎಲ್ಲ ಕಡೆಗಳಿಂದಲೂ ಒತ್ತಡ ಇದೆ. ಚುನಾವಣೆ ಘೋಷಣೆಯಾದ ಅನಂತರ ಒತ್ತಡ ಇನ್ನು ಹೆಚ್ಚಾಗಿದೆ. ಇದು ರಾಜಕೀಯ ಮಹತ್ವಾಕಾಂಕ್ಷೆಯ ವಿಷಯವಲ್ಲ. ವಿಧಾನ ಪರಿಷತ್‌ನಲ್ಲಿ ಸಹಕಾರಿ ಕ್ಷೇತ್ರಕ್ಕೂ ಪ್ರಾತಿನಿಧ್ಯ ಸಿಗಬೇಕು. ಕನಿಷ್ಠ ಒಂದರಿಂದ ಮೂರು ಸೀಟಾದರೂ ಸಹಕಾರಿಗಳಿಗೆ ಮೀಸಲಿಟ್ಟರೆ ಉತ್ತಮ ಎಂದು ಹೇಳಿದರು.