ಕಲಬುರಗಿ: ರಾಜ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಯಾವುದೇ ಕಿತ್ತಾಟ ನಡೆಯುತ್ತಿಲ್ಲ. ಇವತ್ತು ವಿರೋಧ ಪಕ್ಷದ ನಾಯಕರ ಆಯ್ಕೆ ಆಗುತ್ತೆ. ನಾಯಕರ ಭಿನ್ನ ಹೇಳಿಕೆಯನ್ನೇ ಮಾಧ್ಯಮಗಳು ಕಿತ್ತಾಟ ಎಂದು ಬಿಂಬಿಸುವುದು ತಪ್ಪು ಎಂದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಯಾವುದೇ ಗುಂಪು ಇಲ್ಲ. ಪಕ್ಷದ ನಾಯಕರಲ್ಲಿಅಭಿಪ್ರಾಯ ಬೇಧ ಇರ್ತಾವೆ. ಮಾಧ್ಯಮಗಳು ಸುದ್ದಿಯನ್ನು ಸೃಷ್ಟಿ ಮಾಡಿಕೊಂಡು ಹೇಳಬಾರದು ಎಂದು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಎಲ್ಲರೂ ಕೂಡ ಕಾಂಗ್ರೆಸ್ ನವರೇ. ಇಲ್ಲಿ ಮೂಲ, ವಲಸಿಗ ಸಂಬಂಧ ಇಲ್ಲ. ಕಾಂಗ್ರೆಸ್ ದೊಡ್ಡ ಸಮುದ್ರ ಇದ್ದ ಹಾಗೆ. ಎಲ್ಲಾ ನದಿಗಳು ಅದರಲ್ಲಿ ಬಂದು ಸೇರುತ್ತವೆ. ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತಾಡಿಕೊಳ್ಳಲಿ. ಆದರೆ, ಅದನ್ನು ಬಹಿರಂಗ ಪಡಿಸಬಾರದು ಎಂದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ತನ್ನ ನಿರ್ಣಯವನ್ನು ತೆಗೆದುಕೊಳ್ಳೊಕೆ ತೊಂದರೆಯಾಗುತ್ತಿದೆ. ಸಿಎಂ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಬಿಜೆಪಿಯಲ್ಲೂ ಸ್ಥಳಿಯ ಮಟ್ಟದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದರು.
ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡುವ ಧೈರ್ಯ ಕೂಡ ಬಿಜೆಪಿಯ ಯಾವ ನಾಯಕರ ಬಳಿಯೂ ಇಲ್ಲ. ಬಿಜೆಪಿ ಶಾಸಕರು ಧ್ವನಿ ಎತ್ತಿದರೆ ಶೋಕಾಸ್ ನೋಟಿಸ್ ಬರುತ್ತದೆ. ಪ್ರಧಾನಿ ಮೋದಿ ಚಂದ್ರಯಾನ ಸಲುವಾಗಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಹೋಗುವಾಗ ಪ್ರವಾಹ ಬಗ್ಗೆ ವೈಮಾನಿಕ ಸಮೀಕ್ಷೆ ಆದರೂ ಮಾಡಬಹುದಿತ್ತು. ಆದರೆ, ಮೋದಿಯದ್ದು ಚುನಾವಣೆ ಸಮಯದಲ್ಲಿ ಒಂದು ರೀತಿ ವರ್ತನೆ, ಚುನಾವಣೆ ಮುಗಿದ ಮೇಲೆ ಮತ್ತೊಂದು ರೀತಿಯ ವರ್ತನೆ ಇದೆ ಎಂದು ಟೀಕಿಸಿದರು.