ಡಿ.ಜಿ. ಮೋಮಿನ್
ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ ಚುಕ್ಕಾಣೆ ಹಿಡಿದು ವರ್ಷ ಗತಿಸುತ್ತಾ ಬಂದರೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾತ್ರ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ.
ಜಿಲ್ಲೆಯಲ್ಲೇ ಎರಡನೇ ದೊಡ್ಡ ಪಟ್ಟಣವಾದ ಗಜೇಂದ್ರಗಡ ಪುರಸಭೆಗೆ 2018 ಸೆಪ್ಟೆಂಬರ್ ಚುನಾವಣೆ ನಡೆದಿದೆ. ಗಳ ನಂತರ ಆಡಳಿತ ಮಂಡಳಿ ರಚನೆಯಾಗಿದೆ. ಆದರೀಗ ಬಿಜೆಪಿ ನೇತೃತ್ವದ ಆಡಳಿತ, ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲು ವರ್ಷಗಟ್ಟಲೇ ಕಾಯುತ್ತಿದೆ. ಇದಲ್ಲದೇ ಸದಸ್ಯರಲ್ಲಿ ಅಸಮಾಧಾನ ಮೂಡಿದೆ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ನನೆಗುದಿಗೆ: ಪುರಸಭೆ ಆಡಳಿತದಲ್ಲಿ ಸ್ಥಾಯಿ ಸಮಿತಿ ಪಾತ್ರ ಅತ್ಯಂತ ಮುಖ್ಯವಾಗಿದೆ. ಆದರೆ ಪಟ್ಟಣದ ಪುರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಮಾಡಿದ್ದನ್ನು ಹೊರತುಪಡಿಸಿ, ಅಧ್ಯಕ್ಷ ಯಾರಾಗಬೇಕೆನ್ನುವುದು ಮಾತ್ರ ನನೆಗುದಿಗೆ ಬಿದ್ದಿದೆ. ಪರಿಣಾಮ ಪುರಸಭೆ ಆಡಳಿತದಲ್ಲಿ ಕ್ರಿಯಾಶೀಲತೆ ಕುಂದಿದೆ.
2020 ನವೆಂಬರ್ ತಿಂಗಳಲ್ಲೇ ಪುರಸಭೆ ಅಧ್ಯಕ್ಷರಾಗಿ ವೀರಣ್ಣ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ಲೀಲಾವತಿ ವನ್ನಾಲ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಇದುವರೆಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಬಗ್ಗೆ ಆಡಳಿತ ಪಕ್ಷ ಇದುವರೆಗೂ ತುಟಿ ಪಿಟಕ್ ಅಂದಿಲ್ಲ. ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, ಅದರಲ್ಲಿ 18 ಬಿಜೆಪಿ, 5 ಕಾಂಗ್ರೆಸ್ ಸದಸ್ಯರಿದ್ದಾರೆ. ಬಹುಮತ ಹೊಂದಿದ್ದರು ಸಹ ಸಾಮಾನ್ಯ ಸಭೆಯಲ್ಲಿ ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳದ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಕ್ಕೆ ಹಿನ್ನಡೆಯಾಗಿದೆ.
ಅಭಿವೃದ್ಧಿಗೆ ಹಿನ್ನಡೆ: ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಣಕಾಸು, ತೆರಿಗೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇನ್ನಿತರ ಕಾರ್ಯಗಳಿಗೆ ಸ್ಥಾಯಿ ಸಮಿತಿ ಸಹಕಾರ ಅಗತ್ಯ. ಆದರೆ ಸ್ಥಾಯಿ ಸಮಿತಿಗೆ ಅಧ್ಯಕ್ಷನ್ನು ಆಯ್ಕೆ ಮಾಡದೇ ಪುರಸಭೆ ಸ್ತಬ್ಧಗೊಂಡಿದ್ದರಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆಡಳಿತದಲ್ಲಿ ಸ್ಥಾಯಿ ಸಮಿತಿ ಪಾತ್ರ ಮುಖ್ಯ: ಪುರಸಭೆ ಆಡಳಿತದಲ್ಲಿ ಸ್ಥಾಯಿ ಸಮಿತಿ ಪಾತ್ರ ಮುಖ್ಯವಾಗಿದೆ. ವಿಪಕ್ಷಕ್ಕಿಂತ, ಸ್ಥಾಯಿ ಸಮಿತಿ ಅಭಿವೃದ್ಧಿಗೆ ಪೂರಕವಾಗಿದೆ. ಅಲ್ಲದೇ ಪಟ್ಟಣದ ಸಾರ್ವಜನಿಕರ ಸಮಸ್ಯೆಗಳಿಗೆ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿಯೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.