Advertisement

ರಾಜ್ಯದ ಸಿಲಿಂಡರ್‌ಗೆ ಕೇಂದ್ರದ ಗ್ಯಾಸ್‌ ಇಲ್ಲ!

06:00 AM Sep 26, 2017 | |

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ “ಗ್ಯಾಸ್‌ ವಾರ್‌’ ಇನ್ನೂ ನಿಂತಿಲ್ಲ. ಕೇಂದ್ರ ಸರ್ಕಾರದ “ಉಜ್ವಲ’ ಯೋಜನೆ ಮತ್ತು ರಾಜ್ಯದ “ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗಳ ನಡುವಿನ ತಿಕ್ಕಾಟ ಇನ್ನೊಂದು ಮಜಲು ಮುಟ್ಟಿದೆ.

Advertisement

ಕರ್ನಾಟಕವನ್ನು ಪಡಿತರ ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಡುಗೆ ಅನಿಲ ಸಂಪರ್ಕ ಇಲ್ಲದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕೊಡುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ “ಮುಖ್ಯಮಂತ್ರಿ ಅನಿಲಭಾಗ್ಯ’ ಯೋಜನೆಗೆ ಕೇಂದ್ರ ಸರ್ಕಾರದ “ಉಜ್ವಲ’ ಯೋಜನೆ ಅಡ್ಡಿಯಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ. 

ಉಜ್ವಲ ಯೋಜನೆಯ ಈ ವರ್ಷದ ಗುರಿ ಪೂರ್ಣಗೊಳ್ಳುವವರೆಗೆ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಹೇಳಿದೆ ಎನ್ನಲಾಗಿದೆ. ಹೊಸ ಎಲ್‌ಪಿಜಿ ಸಂಪರ್ಕ ಸಿಗದೇ ಇದ್ದರೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಆರಂಭವಾಗುವುದಿಲ್ಲ.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ತನ್ನದೇ ಆದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಇದರ ಘೋಷಣೆ 2017-18ನೇ ಸಾಲಿನ ಬಜೆಟ್‌ನಲ್ಲಿ ಮಾಡಲಾಗಿದೆ. 1 ವರ್ಷದಲ್ಲಿ ಅಡುಗೆ ಅನಿಲ ಸಂಪರ್ಕ ಇಲ್ಲದ 5 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಉಚಿತವಾಗಿ ನೀಡಲು ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ 100 ಕೋಟಿ ರೂ. ಸಹ ಬಿಡುಗಡೆ ಆಗಿದೆ. ಕಳೆದ ಜೂನ್‌ 1ರಂದು ಯೋಜನೆಗೆ ಚಾಲನೆ ನೀಡಲು ಸರ್ಕಾರ ದಿನಾಂಕ ಸಹ ನಿಗದಿಪಡಿಸಿಕೊಂಡಿತ್ತು. ಆದರೆ, ಬಜೆಟ್‌ನಲ್ಲಿ ಘೋಷಣೆಯಾಗಿ 6 ತಿಂಗಳು, ಚಾಲನೆ ದಿನಾಂಕ ನಿಗದಿಯಾಗಿ 3 ತಿಂಗಳು ಕಳೆದರೂ ಯೋಜನೆಗೆ ಚಾಲನೆ ಮಾತ್ರ ಸಿಕ್ಕಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಅಸಲಿಗೆ ಕೇಂದ್ರ ಸರ್ಕಾರದ ಉಜ್ವಲ ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಇವೆರೆಡರ ಉದ್ದೇಶ ಒಂದೇ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದ ಬಿಪಿಎಲ್‌ ಕುಟುಂಬಗಳು ಈ ಯೋಜನೆಗಳ ಫ‌ಲಾನುಭವಿಗಳು. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ 2.5 ಲಕ್ಷ ಕುಟುಂಬಗಳ ಗುರಿ ಇಟ್ಟುಕೊಂಡಿದ್ದರೆ, ರಾಜ್ಯ ಸರ್ಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 5 ಲಕ್ಷ ಕುಟುಂಬಗಳ ಗುರಿ ಇಟ್ಟುಕೊಂಡಿದೆ. ಹೊಸ ಎಲ್‌ಪಿಜಿ ಸಂಪರ್ಕ ಕೊಡಲು ಆರಂಭಿಸಿದರೆ, ಅನಿಲ ಭಾಗ್ಯ ಯೋಜನೆಗೆ ಚಾಲನೆ ಸಿಗುತ್ತದೆ. ಆಗ ಉಜ್ವಲ ಯೋಜನೆಯ ಪ್ರಯೋಜನ ಮತ್ತು ಪ್ರಚಾರ ಕಡಿಮೆಯಾಗಿ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಮುನ್ನೆಲೆಗೆ ಬರುತ್ತದೆ ಎಂಬುದು ಕೇಂದ್ರ ಸರ್ಕಾರದ ಆಲೋಚನೆ ಎಂದು ಹೇಳಲಾಗಿದೆ.

Advertisement

ಈ ಸಂಬಂಧ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಶೇ.70ರಷ್ಟು ಗುರಿ ಪೂರ್ಣಗೊಂಡಿದೆ. ಇನ್ನು ಶೇ.30ರಷ್ಟು ಫ‌ಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಬೇಕಾಗಿದೆ ಎಂದು ಹೇಳಲಾಗುತ್ತಿದೆ. ಇದು ಪೂರ್ಣಗೊಂಡ ಬಳಿಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬಹುದು. ಆಗ ಅನಿಲಭಾಗ್ಯಕ್ಕೆ ಚಾಲನೆ ನೀಡಲಾಗುವುದು. ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ಫ‌ಲಾನುಭವಿಗಳ ಆಯ್ಕೆ ಮಾಡಿ ಅರ್ಹ ಫ‌ಲಾನುಭವಿಗಳಿಗೆ 1,940 ರೂ. ಮೊತ್ತದಲ್ಲಿ 2 ಬರ್ನರ್‌ ಹಾಗೂ ಒಂದು ಸ್ಟವ್‌ ನೀಡಲಾಗುವುದು. ಈ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರ ಯಾವುದೇ ಇರಲಿ, ಅಗತ್ಯ ಸೇವೆ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಬಡವನ ಹಕ್ಕು. ಉಚಿತ ಎಲ್‌ಪಿಜಿ ಸಂಪರ್ಕಕ್ಕೂ ಇದು ಅನ್ವಯವಾಗುತ್ತದೆ. ಈ ವಿಚಾರದಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆದಿದೆ. ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ.’
– ಯು.ಟಿ. ಖಾದರ್‌, ಆಹಾರ ಸಚಿವ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next