ವರದಿ: ಶೀತಲ ಮುರಗಿ
ಕುಂದಗೋಳ: ಕೋವಿಡ್ ಸೋಂಕಿನ ಭೀತಿಯಿಂದ ಸ್ಥಗಿತಗೊಂಡಿದ್ದ ಶಾಲಾ- ಕಾಲೇಜುಗಳನ್ನು ಇದೀಗ ಸರಕಾರ ಹಂತ ಹಂತವಾಗಿ ಆರಂಭಿಸುತ್ತಿದೆ. ಆದರೆ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಇರುವ ಬಸ್ ಗಳಿಗೆ ಜೋತು ಬಿದ್ದು ಹೋಗುವ ದೃಶ್ಯ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿದೆ.
ಕುಂದಗೋಳ ಪಟ್ಟಣದ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜುಗಳಿಗೆ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದು, ಕೋವಿಡ್ ಅಲೆ ಮುಂಚೆ ಮಕ್ಕಳ ಅನುಸಾರವಾಗಿ ಸಾರಿಗೆ ಸೌಲಭ್ಯವಿತ್ತು. ಆದರೆ, ಇದೀಗ ಗ್ರಾಮೀಣ ಪ್ರದೇಶಗಳಿಗೆ ಬೆರಳೆಣಿಕೆಯಷ್ಟು ಸಾರಿಗೆ ಸೌಲಭ್ಯ ಇರುವುದರಿಂದ ಇರುವ ಬಸ್‌ಗೆ ಇರುವೆಯಂತೆ ಮುತ್ತಿಕೊಳ್ಳುವ ದೃಶ್ಯ ಕಂಡುಬರುತ್ತಿದೆ.
ಕೋವಿಡ್ 3ನೇ ಅಲೆ ಹಬ್ಬಬಾರದೆಂದು ಸರಕಾರ ಅಂತರ ಕಾಯ್ದುಕೊಳ್ಳುವಂತೆ ನಿತ್ಯವೂ ಅನೇಕ ತರಹದ ಸುತ್ತೋಲೆಗಳನ್ನು ಜಾರಿಗೆ ತರುತ್ತಿದೆ. ಆದರೆ ಈ ಸರಕಾರಿ ಸಾರಿಗೆ ಸಂಪರ್ಕಕನ್ವಿದು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಪಾಲಕರು ತಮ ¾ ಮಕ್ಕಳನ್ನು ಶಾಲೆಗೆ ಕಳಿಸಲು ಇನ್ನೂ ಸಹ ಹಿಂದೇಟು ಹಾಕುತ್ತಿದ್ದು, ಮಕ್ಕಳ ಭವಿಷ್ಯಕ್ಕಾಗಿ ಶಾಲೆಗೆ ಅಳುಕಿನಿಂದಲೇ ಕಳುಹಿಸುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಬಸ್‌ನ ಕೊರತೆಯಿಂದಾಗಿ ಅನೇಕ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗಿದೆ.
ತಾಲೂಕಿನ ದ್ಯಾವನೂರು ಬಿಳೆಬಾಳ ಗ್ರಾಮದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣಕ್ಕೆ ನಿತ್ಯ ಜ್ಞಾನಾರ್ಜನೆಗಾಗಿ ಆಗಮಿಸುತ್ತಿದ್ದು, ಈ ವಿದ್ಯಾರ್ಥಿಗಳು ನಿತ್ಯ ಒಬ್ಬರ ಮೇಲೆ ಒಬ್ಬರು ಬಿದ್ದು ಪ್ರಯಾಣಿಸುವಂತಾಗಿದೆ. ಪಟ್ಟಣದಿಂದ ಈ ಗ್ರಾಮಕ್ಕೆ ಬೆಳಗ್ಗೆ 7ಕ್ಕೆ ಹಾಗೂ 9ಕ್ಕೆ, ಮಧ್ಯಾಹ್ನ 12ಕ್ಕೆ, ಸಂಜೆ 4ಕ್ಕೆ, ರಾತ್ರಿ 7ಕ್ಕೆ ಬಸ್‌ಗಳು ಬಿಟ್ಟರೆ ಬೇರೆ ಬಸ್‌ಗಳೇ ಇಲ್ಲ. ಈಗ ಶಾಲೆಗಳು ಮಧ್ಯಾಹ್ನ 2 ಗಂಟೆಗೆ ಬಿಡುವುದರಿಂದ ಎರಡು ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ ಕಾದು ಇರುವ ಒಂದು ಬಸ್ ಗೆ ಜೋತು ಬಿದ್ದು ಪ್ರಯಾಣಿಸುವಂತಾಗಿದೆ. ಇದನ್ನು ಬಿಟ್ಟರೆ ಮತ್ತೆ 7 ಗಂಟೆಯ ವರೆಗೆ ನಿಲ್ದಾಣದಲ್ಲಿಯೇ ವಿದ್ಯಾರ್ಥಿಗಳು ಬಸ್ ಬರುವಿಕೆಗಾಗಿ ಕಾಯವಂತಾಗಿದೆ. ಈ ಕುರಿತು ವಿದ್ಯಾರ್ಥಿಗಳು ಮಾತನಾಡಿ, ಶಾಲಿ ಕಲಿಬೇಕೆಂದ್ರ ನಾವು ದಿನಾ ಬಸ್ಸಿಗೆ ಜೋತು ಬಿದ್ದು ಹೋಗುಂಗ ಆಗೀತ್ರಿ. ಏನು ಮಾಡಬೇಕ್ರೀ ನಾವು ಎಂದು ಅಸಹಾಯಕತೆ ತೋಡಿಕೊಂಡರು.