Advertisement

ಸ್ವಚ್ಛತೆಯಲ್ಲಿ ವಾಣಿ ವಿಲಾಸ ರಾಜ್ಯಕ್ಕೆ ನಂ.3

11:38 AM Jan 23, 2017 | Team Udayavani |

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತೆಯ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಅಂಥವರ ಸೊಲ್ಲಡಗಿಸುವ ಸುದ್ದಿಯೊಂದು ಇಲ್ಲಿದೆ. ನಗರದ ವಾಣಿವಿಲಾಸ ಆಸ್ಪತ್ರೆಯು ಸ್ವಚ್ಛತೆ ವಿಚಾರದಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ವಿಜಯಪುರ ಜಿಲ್ಲಾಸ್ಪತ್ರೆ ಪ್ರಥಮ ಸ್ಥಾನದಲ್ಲಿದ್ದರೆ, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಎರಡನೇ ಸ್ಥಾನ ಸಿಕ್ಕಿದೆ. 

Advertisement

ಕೇಂದ್ರ ಸರ್ಕಾರದ “ಸ್ವಚ್ಛ ಭಾರತ ಅಭಿಯಾನ’ದಡಿ “ಸ್ವಚ್ಛತೆ ಕಾಪಾಡುವ ಆಸ್ಪತ್ರೆಗಳಿಗೆ ನೀಡುವ ಕಾಯಕಲ್ಪ ಪ್ರಶಸ್ತಿಗೆ ರಾಜ್ಯ ಸರ್ಕಾರ 2016-17ನೇ ಸಾಲಿಗೆ 35 ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದು, ವಾಣಿ ವಿಲಾಸ ಆಸ್ಪತ್ರೆಯು ಶೇ. 96.5 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ.  ವಾಣಿವಿಲಾಸ ಆಸ್ಪತ್ರೆಯು ಸುಮಾರು 80 ವರ್ಷ ಹಳೆಯ ಆಸ್ಪತ್ರೆಯಾಗಿದ್ದು, ನಿತ್ಯ ಸಾವಿರಾರು ಮಂದಿ ಚಿಕಿತ್ಸೆಗೆ ಆಗಮಿಸುತ್ತಾರೆ.

ಸ್ವಚ್ಛತೆ ಕೊರತೆ ಜತೆಗೆ ಮೆಟ್ರೋ ಕಾಮಗಾರಿಯಿಂದ ಆಸ್ಪತ್ರೆ ಆವರಣ ಹದಗೆಟ್ಟಿತ್ತು. ಆದರೆ, ಈಗ ಆಸ್ಪತ್ರೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಸ್ವಚ್ಛ ಆಸ್ಪತ್ರೆ ಅಭಿಯಾನದಿಂದ ಹೊಸ ರೂಪ ಪಡೆದುಕೊಂಡು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿದೆ. ಶಸ್ತ್ರಚಿಕಿತ್ಸೆಯ ಕೊಠಡಿಗಳನ್ನು ನವೀಕರಿಸಲಾಗಿದೆ. ಹೀಗಾಗಿ ಪ್ರಶಸ್ತಿಯ ಪಟ್ಟಿಯಲ್ಲಿ ವಾಣಿವಿಲಾಸ ಆಸ್ಪತ್ರೆಯನ್ನೂ ಸೇರಿಸಲಾಗಿತ್ತು. 

ಆಸ್ಪತ್ರೆಯಲ್ಲಿ ಸುಧಾರಣೆಗಳನ್ನು ಕಂಡ ಯೋಜನೆಯ ಪದಾಧಿಕಾರಿಗಳ ವರದಿಯಿಂದ ಇದೀಗ ಮೂರನೇ ಸ್ಥಾನ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ಹಿರಿಯ ವೈದ್ಯರು. ರ್‍ಯಾಂಕ್‌ನ ಆಸ್ಪತ್ರೆಗೆ 50 ಲಕ್ಷ ರೂ. ಬಹುಮಾನ: ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸ್ವಚ್ಛತೆಯ ಜತೆಗೆ ಗುಣಮಟ್ಟದ ಹಾಗೂ ಸೋಂಕು ರಹಿತ ಸೇವೆ ನೀಡುವ ಆಸ್ಪತ್ರೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು ಯೋಜನೆಯ ಪ್ರಮುಖ ಉದ್ದೇಶ. 

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ವಿಜಯಪುರ ಜಿಲ್ಲಾ ಆಸ್ಪತ್ರೆಯು ಮೊದಲ ಸ್ಥಾನ ಮತ್ತು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಎರಡನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನ ಪಡೆದ ಆಸ್ಪತ್ರೆಗೆ 50 ಲಕ್ಷ ರೂಪಾಯಿ, ದ್ವಿತೀಯ ಸ್ಥಾನ ಪಡೆದ ಆಸ್ಪತ್ರೆಗೆ 20 ಲಕ್ಷ ರೂ. ಮತ್ತು ಮೂರನೇ ಸ್ಥಾನ ಪಡೆದ ಆಸ್ಪತ್ರೆಗೆ 10 ಲಕ್ಷ ರೂ. ಮತ್ತು ಸಮಾಧಾನಕರ ಬಹುಮಾನ ಪಡೆದ ನಾಲ್ಕು ಆಸ್ಪತ್ರೆಗಳಿಗೆ ತಲಾ ಮೂರು ಲಕ್ಷ ರೂ. ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಸ್ವಚ್ಛತೆ ಮಾತ್ರವಲ್ಲ, ಆಸ್ಪತ್ರೆ ವ್ಯವಸ್ಥಿತ 
ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ ಮಾಡುವ ಬಗೆ ಮತ್ತು ಯಾವ ಚುಚ್ಚುಮದ್ದುಗಳನ್ನು ಯಾವಾಗ ಹಾಕಿಸಿಕೊಳ್ಳಬೇಕು? ಆಹಾರ ಪದ್ಧತಿ, ಜೀವನ ಶೈಲಿ ಸೇರಿ ಇತರೆ ಮಾಹಿತಿ ನೀಡಲು ಆಸ್ಪತ್ರೆಯ 15 ಸ್ಥಳಗಳಲ್ಲಿ ಟಿ.ವಿ. ಹಾಕಲಾಗಿದೆ. ಮಕ್ಕಳ ಅಪಹರಣ, ಕಳ್ಳತನ ತಡೆಯಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ವೈದ್ಯರು ಸೇರಿ ಆಸ್ಪತ್ರೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ರೋಗಿಗಳ ಜತೆ ಮತ್ತು ಅವರ ಕುಟುಂಬದ ಸದಸ್ಯರೊಂದಿಗಿನ ವರ್ತನೆ ಹೇಗಿರಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗಿದೆ. ಸ್ವಚ್ಛತೆ ಕಾಪಾಡುವ ಬಗೆಯೂ ಅರಿವು ಮೂಡಿಸಲಾಗಿದೆ ಎಂದು ಹೇಳಲಾಗಿದೆ. 

ಆಸ್ಪತ್ರೆಗೆ ಬರುವ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಸ್ಪತ್ರೆ ಸಾಧನೆ ಸಂತಸ ತಂದಿದೆ. ಮುಂದೆಯೂ ಸ್ವಚ್ಛತೆ ಜತೆಗೆ ಉತ್ತಮ ಆರೋಗ್ಯ ಸೇವೆಗೆ ಒತ್ತು ನೀಡಲಾಗುವುದು. ಹಾಳಾಗಿದ್ದ ಆಸ್ಪತ್ರೆಯ ಆವರಣವನ್ನು ಉದ್ಯಾನವನ್ನಾಗಿ ಮಾಡಲಾಗಿದ್ದು, ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ನೆಡಲಾಗಿದೆ. 
-ಡಾ. ಪಿ.ಕೆ. ದೇವ್‌ದಾಸ್‌, ಡೀನ್‌, ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

* ಪ್ರಭುಸ್ವಾಮಿ ನಟೇಕರ್‌

Advertisement

Udayavani is now on Telegram. Click here to join our channel and stay updated with the latest news.

Next