Advertisement

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಗೆದ್ದ ನಿತೀಶ್‌

09:45 AM Jul 29, 2017 | Karthik A |

ಪಟ್ನಾ: ರಾಜೀನಾಮೆ ಹೈಡ್ರಾಮಾ ಬಳಿಕ ಮತ್ತೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ನಿತೀಶ್‌ ಕುಮಾರ್‌ ಮತ್ತೂಂದು ‘ಅಗ್ನಿಪರೀಕ್ಷೆ’ ಯಲ್ಲಿಯೂ 131 ವಿಶ್ವಾಸ ಮತಗಳನ್ನು ಪಡೆದು ಸರಕಾರ ಉಳಿಸಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ನಡೆದ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿತೀಶ್‌ ಕುಮಾರ್‌ ಅವರನ್ನು 131 ಸದಸ್ಯರು ಬೆಂಬಲಿಸಿದರೆ, 108 ಸದಸ್ಯರು ವಿರೋಧ ಪಕ್ಷದ ವಾದಕ್ಕೆ ಬೆಂಬಲವಾಗಿ ನಿಂತರು. ನಾಲ್ಕು ಸದಸ್ಯರು ಮತವನ್ನೇ ಚಲಾಯಿಸಲಿಲ್ಲ. ಪರಿಣಾಮ ಒಟ್ಟು ಮತಗಳ ಸಂಖ್ಯೆ 239ಕ್ಕೆ ಇಳಿದಿತ್ತು. ಅಷ್ಟಕ್ಕೂ ವಿಶ್ವಾಸಮತಕ್ಕೆ ಅಗತ್ಯವಿದ್ದ ಸಂಖ್ಯಾಬಲ 120 ಆಗಿತ್ತು. ಇದಕ್ಕಿಂತಲೂ 11 ಮತಗಳನ್ನು ಜಾಸ್ತಿಯೇ ಪಡೆದುಕೊಂಡಿದ್ದು, ಅಡ್ಡಮತದಾನ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಎನ್‌ಡಿಎ ಹಾಗೂ ಜೆಡಿಯು ಮೈತ್ರಿಯ ಪರಿಣಾಮ ಬಿಹಾರದಲ್ಲಿ ಸಿಎಂ ರಾಜೀನಾಮೆ, ಮತ್ತೆ ಪ್ರಮಾಣ ವಚನ, ವಿಶ್ವಾಸಮತ ಪ್ರಹಸನಗಳೆಲ್ಲವೂ ಬಹಳ ಕಡಿಮೆ ಅವಧಿಯಲ್ಲಿ ನಡೆದಿದ್ದು, ಇದಕ್ಕಾಗಿಯೇ ವಿಶೇಷ ಅಧಿವೇಶನವೂ ನಡೆದುಹೋಯಿತು.

Advertisement

ಧ್ವನಿಮತ 2 ಬಾರಿ ವಿಫ‌ಲ: ಸ್ಪೀಕರ್‌ ವಿಶ್ವಾಸ ಸಾಬೀತುಪಡಿಸಲು ನಡೆಸಿದ ಧ್ವನಿಮತ ಯತ್ನ ಪ್ರತಿಪಕ್ಷಗಳು ಮಾಡಿದ ಗದ್ದಲದ ಪರಿಣಾಮ 2 ಬಾರಿ ವಿಫ‌ಲವಾಯಿತು. ಇದಾದ ನಂತರ ಆರ್‌ಜೆಡಿ ಹಿರಿಯ ಶಾಸಕ ಅಬ್ದುಲ್‌ ಸಿದ್ದಿಕಿ ಅವರು ಗುಪ್ತ ಮತದಾನಕ್ಕೆ ಆಗ್ರಹಿಸಿದರು. ಆದರೆ ಸ್ಪೀಕರ್‌ ಇದನ್ನು ತಿರಸ್ಕರಿಸಿದರು.

131 ಮತ ಹೇಗೆ?: ಒಟ್ಟಾರೆ ಬಲದ ಶೇ. 50ಕ್ಕಿಂತ ಜಾಸ್ತಿ ಮತ ಗಳಿಸಿರುವ ನಿತೀಶ್‌ರನ್ನು ಜೆಡಿಯು 70, ಬಿಜೆಪಿಯ 52, 1 ಎಚ್‌ಎಎಂ, 2 ರಾಷ್ಟ್ರೀಯ ಲೋಕ ಸಮತಾ ಪಕ್ಷ, 2 ಎಲ್‌ಜೆಪಿ, 4 ಪಕ್ಷೇತರರು ಬೆಂಬಲಿಸಿದ್ದಾರೆ.

 

ಪಾಕ್‌ನಲ್ಲಿ ಪಟಾಕಿ ಸಿಡಿಸಿದ್ರಾ?: ಶಿವಸೇನೆ ಟಾಂಗ್‌
‘ನಿತೀಶ್‌ ಕುಮಾರ್‌ ಗೆದ್ದಿದ್ದಾರೆ. ಪಾಕಿಸ್ಥಾನದಲ್ಲಿ ಪಟಾಕಿ ಸಿಡಿಸಿದ್ದೀರೋ…?’ ಹೀಗೆಂದು ಕೇಳುವ ಮೂಲಕ ಶಿವಸೇನೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರನ್ನು ಲೇವಡಿ ಮಾಡಿದೆ. ಅದಕ್ಕೂ ಕಾರಣವಿದೆ. “ನಿತೀಶ್‌ ಅವರೊಂದಿಗೆ ಮೈತ್ರಿ ಸಾಧ್ಯವಾಗಿ, ಗೆಲುವು ಸಾಧಿಸಿದರೆ ಪಾಕಿಸ್ಥಾನದಲ್ಲೂ ಪಟಾಕಿ ಸಿಡಿಸಲಾಗುತ್ತದೆ’ ಎಂದು ಚುನಾವಣೆ ವೇಳೆ ಅಮಿತ್‌ ಶಾ ಹೇಳಿಕೆ ನೀಡಿದ್ದರು. 

Advertisement

ಜನ ಸೇವೆ ಮಾಡಲಿದ್ದೇನೆಯೇ ಹೊರತು ಒಂದು ಕುಟುಂಬದ ಸೇವೆಯನ್ನಲ್ಲ. ಜಾತ್ಯತೀತದ ಸೋಗಿನಲ್ಲಿ ಇರುವವರ ಜತೆ ಇರಲು ಖಂಡಿತಾ ಬಯಸುವುದಿಲ್ಲ. ಜನ ನೀಡಿದ ತೀರ್ಪು ದೊಡ್ಡದು. 
– ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

243 : ಒಟ್ಟು ಸದಸ್ಯಬಲ
4 : ಮತಚಲಾಯಿಸದ ಸದಸ್ಯರು
239 : ಮತಚಲಾಯಿಸಿದ ಸದಸ್ಯರು
131 : ಸದಸ್ಯರಿಂದ ವಿಶ್ವಾಸ
108 : ಸದಸ್ಯರಿಂದ ಅವಿಶ್ವಾಸ
120 : ಅಗತ್ಯವಿದ್ದ ಸಂಖ್ಯಾಬಲ

Advertisement

Udayavani is now on Telegram. Click here to join our channel and stay updated with the latest news.

Next