ಪಾಟ್ನಾ: ಹಲವು ಅಕ್ರಮ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‌ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ 72 ಗಂಟೆಗಳ ಗಡುವು ನೀಡಿದ್ದಾರೆ. ಮಂಗಳವಾರವಷ್ಟೇ ನಾಲ್ಕು ದಿನಗಳ ಒಳಗಾಗಿ ಡಿಸಿಎಂ ತೇಜಸ್ವಿ ಯಾದವ್ ಸರ್ಕಾರದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಹೇಳಿರುವ ಬೆನ್ನಲ್ಲೇ ಬುಧವಾರ ಮತ್ತೂಮ್ಮೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ಹುದ್ದೆ ತ್ಯಜಿಸಿ ಎಂದು ಗಡುವು ಕೊಟ್ಟಿದ್ದಾರೆ. ಇದರಿಂದಾಗಿ ಮಹಾ ಮೈತ್ರಿ ಕೂಟಕ್ಕೆ ಧಕ್ಕೆ ಬರುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿದೆ.
‘ಶನಿವಾರ ಸಂಜೆ ಒಳಗಾಗಿ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ತೇಜಸ್ವಿಗೆ ಸಿಎಂ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಲಾಲು ಕುಟುಂಬ ತಮ್ಮ ವಿರುದ್ಧ ಇರುವ ಎಲ್ಲ ಭ್ರಷ್ಟಾಚಾರ ಆರೋಪಗಳ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವ ಅಗತ್ಯವಿದೆ,’ ಎಂದು ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ನನಗೆ ಮೀಸೆಯೇ ಬಂದಿರಲಿಲ್ಲ: ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ವಿರುದ್ಧ ಮಾಡಿರುವ ಆರೋಪ ಮತ್ತು ಎಫ್ಐಆರ್ ದಾಖಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ತೇಜಸ್ವಿ ಯಾದವ್ 2004ರಲ್ಲಿ ನನಗೆ ಮೀಸೆಯೇ ಬಂದಿರಲಿಲ್ಲ. 13-14 ವರ್ಷದವನಾಗಿದ್ದ ನಾನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುಮ್ಮಕ್ಕಿನಿಂದಲಾಗಿಯೇ ತಮ್ಮ ಹಾಗೂ ಕುಟುಂಬ ಸದಸ್ಯರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಮುಗಿಬಿದ್ದು ದಾಳಿ ನಡೆಸಿವೆ ಹಾಗೂ ಕೇಸು ದಾಖಲಿಸಿವೆ ಎಂದು ದೂರಿದ್ದಾರೆ.
ಪ್ರಾಯ ಪ್ರಬುದ್ಧರಾಗಿದ್ದರು: ಮೀಸೆಯೇ ಬಂದಿರಲಿಲ್ಲ ಎಂಬ ತೇಜಸ್ವಿ ಯಾದವ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಸುಶೀಲ್‌ಕುಮಾರ್ 2004ರಲ್ಲಿ ಸಣ್ಣವನಾಗಿದ್ದೆ ಎಂಬ ತೇಜಸ್ವಿ ಯಾದವ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ‘ತೇಜಸ್ವಿ ಯಾದವ್ ದೊಡ್ಡವರಾದ ಮೇಲೆಯೇ ಅವರು ಆಸ್ತಿಯ ಮಾಲೀಕರಾದದ್ದು. ಆ ವೇಳೆಗೆ ಅವರಿಗೆ ಮೀಸೆಯೂ ಮೂಡಿತ್ತು’ ಎಂದು ತಿರುಗೇಟು ನೀಡಿದ್ದಾರೆ. ಅಕ್ರಮ ಎಸಗಿದ್ದ ವೇಳೆ ಪ್ರಾಯ ಪ್ರಬುದ್ಧನಾಗಿರಲಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಶೀಲ್ ಮೋದಿ ಹೇಳಿದ್ದಾರೆ. ಸಾಧ್ಯವಿದ್ದರೆ ಅವರು ಹೊಂದಿರುವ ಆಸ್ತಿಯ ಮಾಲೀಕ ತಾನು ಅಲ್ಲ ಎಂದು ಘೋಷಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ನಿತೀಶ್‌ಗೆ ಥ್ಯಾಂಕ್ಸ್ ಹೇಳಿದ ಸೋನಿಯಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಉಪರಾಷ್ಟ್ರಪತಿ ಸ್ಪರ್ಧೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ನಿತೀಶ್ ಕುಮಾರ್‌ಗೆ ಸೋನಿಯಾ ಗಾಂಧಿ ಧನ್ಯವಾದ ಹೇಳಿದ್ದಾರೆ. ಕೇಂದ್ರದ 18 ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಅವರನ್ನು ಮಂಗಳವಾರ ಆಯ್ಕೆ ಮಾಡಲಾಗಿತ್ತು. ರಾಷ್ಟ್ರಪತಿ ಆಯ್ಕೆ ವೇಳೆ ಎನ್‌ಡಿಎ ಅಭ್ಯರ್ಥಿ ಕೋವಿಂದ್ ಅವರನ್ನು ಬೆಂಬಲಿಸಿದ್ದ ನಿತೀಶ್, ಈ ಬಾರಿ ಪ್ರತಿಪಕ್ಷದ ಅಭ್ಯರ್ಥಿ ಪರ ನಿಂತಿದ್ದಾರೆ. ಹೀಗಾಗಿ ಬಿಹಾರ ಮುಖ್ಯಮಂತ್ರಿಗೆ ಬುಧವಾರ ದೂರವಾಣಿ ಕರೆ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ, ಧನ್ಯವಾದ ತಿಳಿಸಿದ್ದಾರೆ.
9 ಗಂಟೆಗಳ ವಿಚಾರಣೆ: ಲಾಲು ಯಾದವ್ ಅಳಿಯ ಶೈಲೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬರೋಬ್ಬರಿ 9 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.