ಸಾಹಸಸಿಂಹ ವಿಷ್ಣುವರ್ಧನ್, ಅನಂತನಾಗ್, ಬಿ.ಸಿ. ಪಾಟೀಲ್, ಪ್ರಕಾಶ್ ರೈ, ರಮೇಶ್ ಭಟ್, ಸುಮನ್ ನಗರ್‌ಕರ್, ಅವಿನಾಶ್ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ನಿಷ್ಕರ್ಷ’ ಚಿತ್ರ ನಿಮಗೆ ನೆನಪಿರಬಹುದು. 1993ರಲ್ಲಿ ತೆರೆಗೆ ಬಂದಿದ್ದ ಸಸ್ಪೆನ್ಸ್ – ಥ್ರಿಲ್ಲರ್ “ನಿಷ್ಕರ್ಷ’ ಗಾಂಧಿನಗರದಲ್ಲಿ ಸಂತೋಷ್ ಚಿತ್ರಮಂದಿರ ಸೇರಿದಂತೆ ಅನೇಕ ಕೇಂದ್ರಗಳಲ್ಲಿ ನೂರು ದಿನಗಳ ಹೌಸ್‌ಫುಲ್ ಪ್ರದರ್ಶನ ಕಂಡು ದಾಖಲೆ ಬರೆದಿತ್ತು.
ಮೂರು ರಾಜ್ಯ ಪ್ರಶಸ್ತಿಗಳು ಸೇರಿದಂತೆ, ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದ್ದ “ನಿಷ್ಕರ್ಷ’ ಬಳಿಕ ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಕೂಡ ಆಗಿತ್ತು. “ನಿಷ್ಕರ್ಷ’ ತೆರೆಕಂಡು ಬರೋಬ್ಬರಿ ಎರಡೂವರೆ ದಶಕಗಳ ನಂತರ, ಈಗ ಮತ್ತೆ ಗಾಂಧಿನಗರದಲ್ಲಿ “ನಿಷ್ಕರ್ಷ’ದ ಬಗ್ಗೆ ಮಾತು ಶುರುವಾಗಿದೆ. ಹೌದು, “ನಿಷ್ಕರ್ಷ’ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ. ಇದೇ ಸೆಪ್ಟೆಂಬರ್ 18ರಂದು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮದಿನವಿದ್ದು, ವಿಷ್ಣುವರ್ಧನ್ ಜನ್ಮದಿನದ ಕೊಡುಗೆಯಾಗಿ “ನಿಷ್ಕರ್ಷ’ ಚಿತ್ರ ಹೊಸ ತಂತ್ರಜ್ಞಾನದೊಂದಿಗೆ ಸೆ. 20ರಂದು ರೀ-ರಿಲೀಸ್ ಆಗುತ್ತಿದೆ.
ಈ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ಮತ್ತು ನಟ ಬಿ.ಸಿ ಪಾಟೀಲ್, “ನಿಷ್ಕರ್ಷ’ ನಿರ್ಮಾಪಕನಾಗಿ ನನ್ನ ಸಿನಿ ಕೆರಿಯರ್‌ನಲ್ಲಿ ಒಂದು ಅದ್ಭುತ ಮತ್ತು ಅಪರೂಪದ ಚಿತ್ರ. ಚಿತ್ರ ಬಿಡುಗಡೆಯ ನಂತರ ಮಾಡಿದ ದಾಖಲೆಗಳು ಎಲ್ಲರಿಗೂ ಗೊತ್ತೇ ಇದೆ. ಅದರ ಹಿಂದೆ ಅನೇಕ ನೆನಪುಗಳಿವೆ. ಆಗಿನ ಕಾಲಕ್ಕೆ ಲಭ್ಯವಿದ್ದ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ತೆರೆಗೆ ತಂದಿದ್ದೆವು. ಕನ್ನಡ ಚಿತ್ರರಂಗದಲ್ಲಿ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಒಂದು ಎಂದು ಕರೆಸಿಕೊಳ್ಳುವ ಚಿತ್ರವನ್ನು ಇಂದಿನ ತಂತ್ರಜ್ಞಾನದಲ್ಲಿ, ಇಂದಿನ ಆಡಿಯನ್ಸ್‌ಗೆ ಹೊಸ ರೂಪದಲ್ಲಿ ಒಮ್ಮೆ ತೋರಿಸಬೇಕು ಎಂಬ ಆಲೋಚನೆ ತುಂಬಾ ಸಮಯದಿಂದ ಇತ್ತು.
ಅಂತೂ ನಮ್ಮ ಆಲೋಚನೆ ಈಗ ಕಾರ್ಯ ರೂಪಕ್ಕೆ ಬರುತ್ತಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಸಮಯ ತೆಗೆದುಕೊಂಡು ಆಗಿನ “ನಿಷ್ಕರ್ಷ’ವನ್ನು ಈಗಿನ ತಂತ್ರಜ್ಞಾನದಲ್ಲಿ, ಹೊಸ ರೂಪದಲ್ಲಿ ತೆರೆಮೇಲೆ ತರುತ್ತಿದ್ದೇವೆ’ ಎನ್ನುತ್ತಾರೆ. ಚಿತ್ರದ ರೀ-ರಿಲೀಸ್ ಬಗ್ಗೆ ಮಾತನಾಡುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, “ಅಂದು “ನಿಷ್ಕರ್ಷ’ ಬಿಡುಗಡೆಯಾದಾಗ ಎಲ್ಲಾ ಕಡೆಗಳಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರ ಸುಮಾರು ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಕ್ಕೆ ಅಷ್ಟೊಂದು ದೊಡ್ಡ ಪ್ರತಿಕ್ರಿಯೆ ಸಿಕ್ಕಿದ್ದು ಇಂದಿಗೂ ರೋಚಕ ಸಂಗತಿ.
ನನ್ನನ್ನು ಸೇರಿದಂತೆ ಚಿತ್ರದ ನಿರ್ಮಾಪಕರು, ಕಲಾವಿದರು, ತಂತ್ರಜ್ಞರ ವೃತ್ತಿ ಜೀವನದಲ್ಲಿ “ನಿಷ್ಕರ್ಷ’ ದೊಡ್ಡ ಬ್ರೇಕ್ ನೀಡಿತ್ತು. ಈಗಲೂ ಅನೇಕರು ಮಾತನಾಡುವಾಗ “ನಿಷ್ಕರ್ಷ’ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅಷ್ಟೊಂದು ಜನಪ್ರಿಯವಾಗಿದ್ದ ಚಿತ್ರವನ್ನು ಮತ್ತೆ ಜನರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ. ಇದೇ ವೇಳೆ ಚಿತ್ರದ ನಟಿ ಸುಮನ್ ನಗರ್‌ಕರ್ ಸೇರಿದಂತೆ “ನಿಷ್ಕರ್ಷ’ ಚಿತ್ರದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕೂಡ ಚಿತ್ರ ನೂತನ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಆಗುತ್ತಿರುವುದರ ಬಗ್ಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ.
“ನಿಷ್ಕರ್ಷ’ ಚಿತ್ರಕ್ಕೆ ಪಿ. ರಾಜನ್ ಛಾಯಾಗ್ರಹಣ ಮತ್ತು ಜನಾರ್ಧನ್ ಆರ್ ಸಂಕಲನ ಕಾರ್ಯ ನಿರ್ವಹಿಸಿದ್ದರು. ಚಿತ್ರಕ್ಕೆ ಗುಣ ಸಿಂಗ್ ಹಿನ್ನೆಲೆ ಸಂಗೀತ ನೀಡಿದ್ದರು. “ಸೃಷ್ಠಿ ಫಿಲಂಸ್’ ಬ್ಯಾನರ್‌ನಲ್ಲಿ ನಟ ಬಿ.ಸಿ ಪಾಟೀಲ್ “ನಿಷ್ಕರ್ಷ’ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರದ ಬಹುಭಾಗದ ಚಿತ್ರೀಕರಣ ಮಣಿಪಾಲ್ ಸೆಂಟರ್‌ನಲ್ಲಿ ನಡೆದಿತ್ತು. ಒಟ್ಟಾರೆ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ “ನಿಷ್ಕರ್ಷ’ ಚಿತ್ರವನ್ನು ಇಂದಿನ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಎಂಜಾಯ್ ಮಾಡುತ್ತಾರೆ ಅನ್ನೋದು ಶೀಘ್ರದಲ್ಲೆ ಗೊತ್ತಾಗಲಿದೆ.