ದಾಖಲೆಯ ಮೋದಿ -3.0 ಸರಕಾರದ ಇನ್ನೊಂದು ದಾಖಲೆಯಾಗಿ ನಿರ್ಮಲಾ ಸೀತಾರಾಮನ್ ಅವರು 7ನೇ ಬಾರಿಗೆ ಮುಂಗಡ ಪತ್ರವನ್ನು ಮಂಡಿಸಿದ್ದಾರೆ. ಹಲವು ಕಾರಣಗಳಿಗಾಗಿ ಈ ಬಜೆಟ್ ಸ್ಮರಣಾರ್ಹ ಮತ್ತು ಉಲ್ಲೇಖಾರ್ಹವಾಗಿರುವುದು ಕೂಡ ಒಂದು ದಾಖಲೆಯೇ. ವಿಶೇಷವಾಗಿ ಮೋದಿಯವರ ವಿಕಸಿತ ಭಾರತ ಧ್ಯೇಯ ಸಾಧನೆಗಾಗಿ ದೂರಗಾಮಿ ಪರಿಣಾಮಗಳನ್ನು ಬೀರುವಂತೆ ರೂಪಿಸಿದ ಬಜೆಟ್ ಇದು. ತತ್‌ಕ್ಷಣಕ್ಕೆ ಖುಷಿ ಉಂಟು ಮಾಡುವಂತಹ “ಜನಪ್ರಿಯತೆ’ಯ ಘೋಷಣೆಗಳು ಇದರಲ್ಲಿ ಕಡಿಮೆ ಇವೆ. ಆದರೆ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು, ಮಧ್ಯಮ ವರ್ಗ ಸೇರಿದಂತೆ ಆದಾಯ ತೆರಿಗೆ ಪಾವತಿದಾರನಿಗೆ ತುಸು ಉಳಿತಾಯ, ಔದ್ಯಮಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸೂಕ್ಷ್ಮ ಸಂವೇದಿ ಬಜೆಟ್ ಇದು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ.
ಲೋಕಸಭಾ ಚುನಾವಣೆಗೆ ಮುನ್ನ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ್ಯಾಂತರ ಬಜೆಟ್‌ನ ಹಲವು ಮುಖ್ಯಾಂಶಗಳನ್ನು ಈ ಬಾರಿಯ ಪೂರ್ಣ ಮುಂಗಡ ಪತ್ರದಲ್ಲಿ ಉಳಿಸಿಕೊಳ್ಳಲಾಗಿದೆ. ಮುಖ್ಯವಾಗಿ ಉಚಿತ ಪಡಿತರವನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಿರುವುದು ಬಡ ಮತ್ತು ಕಡುಬಡ ವರ್ಗದವರಿಗೆ ನೆಮ್ಮದಿ ತರುವ ವಿಷಯ. ನಿರ್ಮಲಾ ಅವರು ತಮ್ಮ ಬಜೆಟ್‌ನಲ್ಲಿ ಸರಕಾರ ಗಮನ ಹರಿಸಿರುವ ಒಂಬತ್ತು ಅಂಶಗಳ ಬಗ್ಗೆ ಹೇಳಿದ್ದಾರೆ. ಕೃಷಿಯಲ್ಲಿ ಉತ್ಪಾದಕತೆ ಮತ್ತು ನಮ್ಯತೆ, ಉದ್ಯೋಗ ಸೃಷ್ಟಿ ಮತ್ತು ಕೌಶಲವೃದ್ಧಿ, ಸಮಗ್ರ ಮಾನವ ಸಂಪದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವಾಕ್ಷೇತ್ರ, ನಗರಾಭಿವೃದ್ಧಿ, ಶಕ್ತಿ ಭದ್ರತೆ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ, ಮುಂದಿನ ಪೀಳಿಗೆಯ ಸುಧಾರಣೆಗಳತ್ತ ಸರಕಾರದ ಗಮನ ಎಂದು ಅವರು ಹೇಳಿದ್ದು, ಬಜೆಟ್ ಕೂಡ ಈ ಅಂಶಗಳಿಗೆ ಒತ್ತು ನೀಡಿರುವುದನ್ನು ಗಮನಿಸಬಹುದಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಕಳೆದ ಲೋಕಸಭಾ ಚುನಾವಣೆ ಮತ್ತು ಮುಂದೆ ಬರಲಿರುವ ಹರಿಯಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನೆರಳು ಕೂಡ ಇರುವುದನ್ನು ಗಮನಿಸಬಹುದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400+ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿತ್ತಾದರೂ ಅದು ಕನಸಾಗಿಯೇ ಉಳಿಯಿತು. ಹಲವು ರೀತಿಯ ಜನಕಲ್ಯಾಣ ಯೋಜನೆ, ಕ್ರಮಗಳನ್ನು ಬಿಜೆಪಿ ಸರಕಾರ ಕಳೆದ ಎರಡು ಅವಧಿಗಳಲ್ಲಿ ಕೈಗೊಂಡಿದ್ದರೂ ಲೋಕಸಭಾ ಚುನಾವಣೆಯ ಹಿನ್ನಡೆಗೆ ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ಕಾರಣ ಎನ್ನಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಅದನ್ನು ಪರಿಹರಿಸುವ ಗಟ್ಟಿತನದ ಕ್ರಮಗಳನ್ನು ಹಾಕಿಕೊಳ್ಳಲಾಗಿದೆ, ಇದು ಸ್ವಾಗತಾರ್ಹ.
ಇನ್ನು ಮಧ್ಯಮ ವರ್ಗದವರಿಗೆ ನೆಮ್ಮದಿ ನೀಡುವ ಕ್ರಮವಾಗಿ ಆದಾಯ ತೆರಿಗೆಯ ಸ್ಲಾéಬ್‌ಗಳಲ್ಲಿ ಬದಲಾವಣೆಗಳನ್ನು ತಂದಿರುವುದು ಕೂಡ ಉತ್ತಮ ಅಂಶ. ಹಾಗೆಯೇ ಕ್ಯಾಪಿಟಲ್ ಗೈನ್ಸ್ ನಿಯಮಗಳನ್ನು ಕೊಂಚ ಬದಲಾಯಿಸಿ ಜನರಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ಕೂಡ ಹೆಚ್ಚಿಸಲಾಗಿರುವುದು ಉತ್ತಮ ಕ್ರಮ. ಕ್ಯಾನ್ಸರ್ ಸಂಬಂಧಿತ ಕೆಲವು ಔಷಧಗಳ ಬೆಲೆ ಇಳಿಕೆಯೂ ಉತ್ತಮ ನಡೆ.
ಜಿಎಸ್‌ಟಿ ಸರಳೀಕರಣ, ವಿದೇಶೀ ಬಂಡವಾಳ ಆಕರ್ಷಣೆಯ ಕ್ರಮಗಳು, ಪರಮಾಣು ಇಂಧನ ಕ್ಷೇತ್ರಕ್ಕೆ ಉತ್ತೇಜನ ನೀಡಬಲ್ಲ ಕ್ರಮಗಳು ಕೂಡ ನಿರ್ಮಲಾ ಅವರ ಬಜೆಟ್‌ನ ಗಮನಾರ್ಹ ಮುಖ್ಯಾಂಶಗಳು.
ಒಟ್ಟಾರೆಯಾಗಿ ಹೇಳುವುದಾದರೆ, ತತ್‌ಕ್ಷಣಕ್ಕೆ ಜನರ ಮನಸ್ಸನ್ನು ಗೆಲ್ಲುವಂತಹ ಎದ್ದು ಕಾಣುವ ಘೋಷಣೆಗಳು ಇಲ್ಲದಿದ್ದರೂ ದೂರಗಾಮಿಯಾಗಿ ಜನಕಲ್ಯಾಣವನ್ನು ಸಾಧಿಸುವಂತಹ ಉತ್ತಮ ಮುಂಗಡಪತ್ರವಾಗಿ ನಿರ್ಮಲಾ ಅವರ ಸಪ್ತಮ ಬಜೆಟ್ ಮಂಡನೆಯಾಗಿದೆ.