Advertisement

Valmiki scam ಪ್ರಸ್ತಾವಿಸಿ ಕಾಂಗ್ರೆಸ್‌ಗೆ ನಿರ್ಮಲಾ ತಿರುಗೇಟು

01:12 AM Jul 31, 2024 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಕಡಿಮೆ ಹಣ ಮೀಸಲಿಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಕ್ಕೆ ಕರ್ನಾಟಕ ಕಾಂಗ್ರೆಸ್‌ ಸರಕಾರದಲ್ಲಿ ನಡೆದಿದೆ ಎನ್ನಲಾದ “ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ’ ವನ್ನು ಪ್ರಸ್ತಾವಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದರು.

Advertisement

ಮಂಗಳವಾರ ಲೋಕಸಭೆ ಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, “ಸಂಸತ್ತಿನಲ್ಲಿ ನಮ್ಮ ಸರಕಾರವನ್ನು ಪ್ರಶ್ನಿಸುವವರು ಕರ್ನಾಟಕಕ್ಕೆ ಹೋಗಿ, ಎಸ್‌ಸಿ, ಎಸ್‌ಟಿ ಹಣ ಏನಾಗಿದೆ ಎಂದು ತಿಳಿದುಕೊಳ್ಳಿ’ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಲ್ಲೇ ಇದ್ದರು.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರವು ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿ 9,980 ಕೋಟಿ ರೂ. ಮೀಸಲಿಟ್ಟಿತ್ತು. ಈ ಪೈಕಿ 4,301 ಕೋಟಿ ರೂ. ಹಣ ಎಲ್ಲಿಗೆ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಎಸ್‌ಸಿ ಮತ್ತು ಎಸ್‌ಟಿಗಳ ಹೆಸರಿನಲ್ಲಿ ಕರ್ನಾಟಕದಲ್ಲಿ ಅತಿದೊಡ್ಡ ಹಗರಣವೇ ನಡೆದಿದೆ. ಎಸ್‌ಟಿಗಳ ಕಲ್ಯಾಣಕ್ಕಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಕೇವಲ 89 ಕೋಟಿ ರೂ. ವರ್ಗಾವಣೆಯಾಗಿದೆ ಎನ್ನುತ್ತಾರೆ ಎಂದರು.

ರಾಹುಲ್‌ಗೆ ನಿರ್ಮಲಾ ತಿರುಗೇಟು
ಬಜೆಟ್‌ ಹಲ್ವಾ ಹಂಚಿಕೆ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಅಧಿಕಾರಿಗಳು ಇಲ್ಲ ಎಂದು ಹೇಳುವ ಮೂಲಕ ಸಮಾಜವನ್ನು ಒಡೆಯುವ ಸಂಚು ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ನಿರ್ಮಲಾ ಕಿಡಿಕಾರಿದರು. ಎಸ್‌ಸಿ, ಎಸ್‌ಟಿ, ಒಬಿಸಿ ಬಗ್ಗೆ ಕೇಳುತ್ತಿರುವ ನಾಯಕರು ತಮ್ಮ ರಾಜೀವ್‌ ಗಾಂಧಿ ಧರ್ಮದರ್ಶಿ ಸಂಸ್ಥೆಯಲ್ಲಿ ಎಷ್ಟು ಎಸ್‌ಸಿ, ಎಸ್‌ಟಿ, ಒಬಿಸಿ ಟ್ರಸ್ಟಿಗಳಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಕುಟುಕಿದರು.

ಬಜೆಟ್‌ಗೆ ಲೋಕಸಭೆ ಅನುಮೋದನೆ
2024-25ನೇ ಹಣಕಾಸು ವರ್ಷದ 48.21 ಲಕ್ಷ ಕೋಟಿ ರೂ. ಬಜೆಟ್‌ಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿತು. ಇದೇ ವೇಳೆ ಜಮ್ಮು ಮತ್ತು ಕೇಂದ್ರಾಡಳಿತ ಪ್ರದೇಶದ ಬಜೆಟ್‌ಗೂ ಲೋಕಸಭೆ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು.

Advertisement

ಯುಪಿಎ ಸರಕಾರ 26 ರಾಜ್ಯಗಳ
ಹೆಸರನ್ನೇ ಉಲ್ಲೇಖಿಸಿರಲಿಲ್ಲ: ಸಚಿವೆ
ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚು ಹಣ ನೀಡಲಾಗಿದೆ. ಎಲ್ಲ ರಾಜ್ಯಗಳನ್ನು ಹೆಸರಿಸಿಲ್ಲ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಚಿವೆ ನಿರ್ಮಲಾ, ಈ ವಿಷಯದಲ್ಲಿ ವಿಪಕ್ಷಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದರು. ರಾಜ್ಯಗಳ ಹೆಸರು ಹೇಳಿಲ್ಲ ಎಂದಾಕ್ಷಣ ಬಜೆಟ್‌ನಲ್ಲಿ ರಾಜ್ಯಗಳನ್ನು ಸೇರಿಸಿಲ್ಲ ಎಂದರ್ಥವಲ್ಲ. ಎಡಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ 818 ಕೋಟಿ ರೂ. ನೀಡಲಾಗಿದೆ ಎಂದು ಪ್ರತ್ಯುತ್ತರ ನೀಡಿದರು. ಅಲ್ಲದೆ ಯುಪಿಎ ಆಡಳಿತದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರುಗಳನ್ನೇ ಉಲ್ಲೇಖೀಸಲಾಗಿರಲಿಲ್ಲ ಎಂದರು. ಜತೆಗೆ ಯಾವ ಬಜೆಟ್‌ನಲ್ಲಿ ಎಷ್ಟು ರಾಜ್ಯಗಳ ಹೆಸರು ಬಿಟ್ಟು ಹೋಗಿತ್ತು ಎಂಬ ವಿವರವನ್ನೂ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next