ಮೀರತ್ : ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಕ್ರೂರಿಗಳು. ಇವರಲ್ಲಿ ಮನುಷ್ಯತ್ವವಿಲ್ಲ. ಅಪರಾಧ ಕೃತ್ಯಗಳ ತಡೆಗೆ ಜೀವಾವಧಿ ಶಿಕ್ಷೆಗಿಂತ ಮರಣದಂಡನೆಯೇ ಸೂಕ್ತ. ಫೆ. 1ರಂದು ಈ ನಾಲ್ವರಿಗೆ ನೇಣು ಬಿಗಿಯಲಿರುವ ವಧಾಕಾರ (ಗಲ್ಲಿಗೇರಿಸುವ ವ್ಯಕ್ತಿ) ಪವನ್ ಜಲ್ಲಾದ್ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಇವರ ಮುತ್ತಜ್ಜ ಕೂಡ ವಧಾಕಾರನಾಗಿದ್ದು, ಅವರು ಇಂದಿರಾ ಗಾಂಧಿ ಹಂತಕರು ಹಾಗೂ ಅಪಹರಣ, ಕೊಲೆ ಪ್ರಕರಣ ಇಬ್ಬರು ದೋಷಿಗಳನ್ನು ಗಲ್ಲಿಗೇರಿಸಿದ್ದರು. ತಮ್ಮ ಮುತ್ತಜ್ಜ ಅವರೇ ನನಗೆ ಗುರು ಎಂದು 53 ವರ್ಷದ ಪವನ್ ಜಲ್ಲಾದ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸರಕಾರದಿಂದ ಇವರಿಗೆ ಮಾಸಿಕ 5 ಸಾವಿರ ರೂ.ಗೌರವ ಧನ ದೊರೆಯಲಿದೆ.
ವಧಾಕಾರನಾಗಿರುವ ನನ್ನನ್ನು ನನ್ನ ಮನೆಯವರು ಹೆಚ್ಚು ಪ್ರೀತಿಸುತ್ತಾರೆ. ದೋಷಿಗಳನ್ನು ಗಲ್ಲಿಗೇರಿಸಿದ ಸಂದರ್ಭದಲ್ಲಿ ಈ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇವರ ಸಂದರ್ಶನಕ್ಕೆ ಇದೀಗ ಭಾರೀ ಬೇಡಿಕೆ ಇದೆ. ದೇಶದಲ್ಲಿರುವ ಏಕೈಕ ವಧಾಕಾರ ಇವರಾಗಿದ್ದಾರೆ.
ಮತ್ತೂಂದು ನಾಟಕ!: ಪದೇ ಪದೇ ಕೋರ್ಟ್ ಮೆಟ್ಟಿಲೇರುವ ಮೂಲಕ ಗಲ್ಲು ಶಿಕ್ಷೆ ವಿಳಂಬ ಮಾಡುತ್ತಿರುವ ಅತ್ಯಾಚಾರಿಗಳು ಈಗ ಹೊಸ ನಾಟಕ ಶುರು ಮಾಡಿದ್ದಾರೆ. ತಿಹಾರ್ ಜೈಲಿನ ಅಧಿಕಾರಿಗಳು ನಮಗೆ ಕೆಲವು ದಾಖಲೆಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅತ್ಯಾಚಾರಿಗಳ ಪರ ವಕೀಲರೊಬ್ಬರು ದಿಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅತ್ಯಾಚಾರಿ ವಿನಯ್ ಶರ್ಮಾ ಬರೆದಿರುವ 172 ಪುಟಗಳ ಡೈರಿಯನ್ನೂ ಕ್ಷಮಾದಾನ ಅರ್ಜಿಯೊಂದಿಗೆ ಲಗತ್ತಿಸಲು ನಿರ್ಧರಿಸಿದ್ದೇವೆ. ಆದರೆ ಆ ಡೈರಿಯನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ದೂರಿದ್ದಾರೆ.