ತಿರುವನಂತಪುರ: “ನಿಫಾ ಸೋಂಕಿನಿಂದಾಗಿ ಇತ್ತೀಚೆಗೆ ಮೃತಪಟ್ಟಿದ್ದ 12 ವರ್ಷದ ಬಾಲಕನ ಜೊತೆಗೆ ಪ್ರಾಥಮಿಕ ಹಂತದ ನಂಟು ಹೊಂದಿದ್ದ ನಾಲ್ವರು ಸೋಂಕಿಗೆ ಒಳಗಾಗಿಲ್ಲ. ಅವರಿಂದ ಪಡೆಯಲಾದ ಸ್ಯಾಂಪಲ್‌ಗಳು ನೆಗೆಟಿವ್ ಫಲಿತಾಂಶ ನೀಡಿವೆ” ಎಂದು ಕೇರಳದ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದಾರೆ.
“ಈ ನಾಲ್ವರನ್ನು ಈ ಹಿಂದೆಯೂ ಪರೀಕ್ಷೆಗೊಳಪಡಿಸಲಾಗಿತ್ತು. ಆಗಲೂ ಅವರ ಸ್ಯಾಂಪಲ್‌ಗಳು ನೆಗೆಟಿವ್ ಫಲಿತಾಂಶ ಕೊಟ್ಟಿದ್ದವು. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗಿದ್ದು, ಈ ಬಾರಿಯೂ ಅವರ ಸ್ಯಾಂಪಲ್‌ಗಳು ನೆಗೆಟಿವ್ ಫಲಿತಾಂಶ ನೀಡಿವೆ” ಎಂದು ಅವರು ತಿಳಿಸಿದ್ದಾರೆ.
“ಬಾಲಕನಿದ್ದ ಪ್ರದೇಶದಲ್ಲೂ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಸೋಂಕಿನ ಮೂಲ ಸ್ಥಳವನ್ನು ಪತ್ತೆ ಹಚ್ಚುವುದು ಮುಖ್ಯವಾಗುತ್ತದೆ. ಹಾಗಾಗಿ, ಪುಣೆಯಿಂದ ಬಂದಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ತಜ್ಞರ ತಂಡ, ಬಾಲಕನಿದ್ದ ಪ್ರದೇಶದಲ್ಲಿ ಇರುವ ಎಲ್ಲಾ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ 2400ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ
“ಇನ್ನು, ಹೈ ರಿಸ್ಕ್ ಹಂತದಲ್ಲಿರುವ ಕೆಲವು ಸೋಂಕಿತರನ್ನು ಕಲ್ಲಿಕೋಟೆ ವೈದ್ಯಕೀಯ ಆಸ್ಪತ್ರೆಯಲ್ಲೇ ಐಸೋಲೇಟ್ ಮಾಡಲಾಗಿದೆ. ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಅವರು ತಿಳಿಸಿದ್ದಾರೆ.