Advertisement

Nipah virus; ನಿಫಾ ಸೋಂಕಿಗೆ 14 ವರ್ಷದ ಕೇರಳ ಬಾಲಕ ಮೃತ್ಯು

05:27 PM Jul 21, 2024 | Team Udayavani |

ಮಲಪ್ಪುರಂ : ನಿಫಾ ವೈರಸ್ (Nipah virus) ಸೋಂಕಿಗೆ ಒಳಗಾಗಿದ್ದ ಮಲಪುರಂ ಜಿಲ್ಲೆಯ  14 ವರ್ಷದ ಬಾಲಕ ಹೃದಯಸ್ತಂಭನ (cardiac arrest) ದಿಂದ ಮೃತಪಟ್ಟಿರುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಸಚಿವೆ ವೀಣಾ ಮಾತನಾಡಿ ಬಾಲಕ ಭಾನುವಾರ ಬೆಳಗ್ಗೆ ಮಂಜೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಳಗ್ಗೆ 11:30ರ ಸಮಯದಲ್ಲಿ ಕೊನೆಯುಸಿರೆಳೆದಿರುವುದು ಗೊತ್ತಾಗಿದೆ. ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್​ನ ನಿವಾಸಿಯಾದ ಆ ಹುಡುಗನಿಗೆ ನಿಫಾ ವೈರಸ್ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿತ್ತು.

‘ಆ ಬಾಲಕ ವೆಂಟಿಲೇಟರ್​ನಲ್ಲಿದ್ದ. ಭಾನುವಾರ ಬೆಳಗ್ಗೆ ಆತನ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆ ಆಗಿತ್ತು. 10:50ರಲ್ಲಿ ತೀವ್ರವಾಗಿ ಹೃದಯ ಸ್ತಂಭನ ಉಂಟಾಯಿತು. ಆ ಬಳಿಕ ಪುನಶ್ಚೇತನಗೊಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಬೆಳಗ್ಗೆ 11:30ಕ್ಕೆ ಮೃತಪಟ್ಟ.  ಅಂತಾರಾಷ್ಟ್ರೀಯ ನಿಯಮಗಳ ಅನುಸಾರವಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗುವುದು,’ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ:
ನಿಫಾ ವೈರಸ್ ಕುರಿತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿ  “ಕೆಲವು ವರ್ಷಗಳ ಹಿಂದೆ ಕೇರಳಕ್ಕೆ ನಿಫಾ ವೈರಸ್  ಬಾಧಿಸಿತ್ತು, ಅದಕ್ಕೆ  ಕೇರಳ ರಾಜ್ಯವು ಆಗ ತ್ವರಿತ ಕ್ರಮ ಕೈಗೊಂಡಿತ್ತು. ಆದ್ದರಿಂದ ಈ ಬಾರಿಯು  ಸರ್ಕಾರ ಮತ್ತು ಅಧಿಕಾರಿಗಳು, ವಿಶೇಷವಾಗಿ ವೈದ್ಯಕೀಯ ಪರಿಣತರು ಪರಿಸ್ಥಿತಿ ನಿಯಂತ್ರಣಕ್ಕೆ ತರುತ್ತಾರೆ ಎಂಬ ಭರವಸೆ ಇಟ್ಟುಕೊಂಡಿದ್ದೇನೆ ಎಂದರು.

ನಿಫಾ ವೈರಸ್ ಸೋಂಕಿಗೆ ಮದ್ದು ಇಲ್ಲ:
ನಿಫಾ ವೈರಸ್ ಕೇರಳಕ್ಕೆ ಆಗಾಗ್ಗೆ ಬಾಧಿಸುತ್ತಿರುತ್ತದೆ. ಬಾವುಲಿ ಮತ್ತು ಹಂದಿಗಳ ಮೈನಲ್ಲಿರುವ ದ್ರವದ ಮೂಲಕ ಮನುಷ್ಯರಿಗೆ ನಿಫಾ ವೈರಸ್ ಹರಡುತ್ತದೆ. ಇದು ಮನುಷ್ಯರಿಂದ ಮನುಷ್ಯರಿಗೂ ಹರಡುವ ಸೋಂಕು ರೋಗವಾಗಿದೆ. ಕೋವಿಡ್ ಸೋಂಕಿನಂತೆ ಈ ನಿಫಾ ವೈರಸ್ ಸೋಂಕು ಗುಣಪಡಿಸಲು ಯಾವ ಚಿಕಿತ್ಸೆ ಇಲ್ಲ. ಮರಣ ಪ್ರಮಾಣ ಶೇ. 70ರಷ್ಟಿದೆ. ಅಂದರೆ ಸೋಂಕಿತರಲ್ಲಿ ಶೇ. 70ರಷ್ಟು ಜನರು ಬದುಕುವುದಿಲ್ಲ. ಇದರ ಬೆನ್ನಲ್ಲೇ ಕೇರಳಕ್ಕೆ ಗಡಿ ಹಂಚಿಕೊಂಡಿರುವ ಕರ್ನಾಟಕ ಜಿಲ್ಲೆಗಳಲ್ಲೂ ಕೂಡ ಹೈ ಅಲರ್ಟ್ ಘೋಷಿಸಲಾಗಿದೆ.
ನಿಫಾ ವೈರಸ್ ಸೋಂಕಿನ ಲಕ್ಷಣಗಳೇನು?
ನಿಫಾ ವೈರಸ್ ಸೋಂಕು ತಗುಲಿದ ವ್ಯಕ್ತಿಗೆ ಮೊದಲು ಜ್ವರ ಬರುತ್ತದೆ. ತಲೆನೋವು, ವಾಂತಿ, ಉಸಿರಾಟ ತೊಂದರೆ ಕಾಣಿಸುತ್ತದೆ. ಮಿದುಳು ಉರಿಯೂತ, ಸ್ನಾಯು ಸೆಳೆತ ಇತ್ಯಾದಿ ಬಾಧೆ ಬರಬಹುದು. ರೋಗಿ ಕೋಮಾ ಸ್ಥಿತಿಗೆ ಜಾರಿ, ಮೃತಪಡಬಹುದು ಎಂದು ವೈದ್ಯರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next