ಸುಳ್ಯ: ಈ ರಸ್ತೆಯಲ್ಲಿ ಸಂಚರಿಸು ವುದೇ ವಾಹನ ಸವಾರರಿಗೆ ಸವಾಲು. ರಸ್ತೆಯ ಒಂದು ಗುಂಡಿ ತಪ್ಪಿಸಲು ಇನ್ನೊಂದು ಗುಂಡಿಗೆ ವಾಹನ ಇಳಿಸಬೇಕಾದ ಪರಿಸ್ಥಿತಿ ಇದ್ದು ಸವಾರರು ನಿತ್ಯ ಸಂಕಟ ಪಡುತ್ತಲೇ ಸಂಚರಿಸಬೇಕಾದ ಸ್ಥಿತಿಯಿದೆ.
ಇದು ತಾಲೂಕು ಕೇಂದ್ರ ಸುಳ್ಯವನ್ನು ಸಂಪರ್ಕಿಸುವ ನಿಂತಿಕಲ್ಲು- ಬೆಳ್ಳಾರೆ- ಸುಳ್ಯ ಹೆದ್ದಾರಿಯ (ಮೇಲ್ದರ್ಜೆಗೇರಿಸಲಾದ ರಾಜ್ಯ ಹೆದ್ದಾರಿ) ಕತೆ. ರಸ್ತೆಯಲ್ಲಿರುವ ಹೊಂಡ-ಗುಂಡಿಗಳು ಅಪಘಾತಗಳಿಗೂ ಕಾರಣ ವಾಗುತ್ತಿದೆ. ನಿಂತಿಕಲ್ಲು ಪೇಟೆಯಿಂದ ಬೆಳ್ಳಾರೆವರೆಗೆ ಹಾಗೂ ಬೆಳ್ಳಾರೆಯಿಂದ ಬೇಂಗಮಲೆವರೆಗೆ ಅಲ್ಲಲ್ಲಿ ಹೊಂಡ-ಗುಂಡಿ ನಿರ್ಮಾಣ ಗೊಂಡಿದೆ. ನಿಂತಿಕಲ್ಲು-ಬೆಳ್ಳಾರೆ ನಡುವಿನ ಸ್ಥಿತಿ ಶೋಚನೀಯವಾಗಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಮಾಡದೆ ಇರುವುದೇ ರಸ್ತೆ ಹಾಳಾಗಲು ಮುಖ್ಯ ಕಾರಣ. ಪ್ರತೀ ವರ್ಷ ಮಳೆಗಾಲದಲ್ಲಿ ಗುಂಡಿ ನಿರ್ಮಾಣವಾಗುವ ಸ್ಥಳಗಳಲ್ಲಿ ಶಾಶ್ವತ ರೀತಿಯ ಪರಿಹಾರ ಕಾರ್ಯ ನಡೆಸದೆ ಕೇವಲ ತೇಪೆ ಕಾರ್ಯನಡೆಸುತ್ತಾರೆ ಎಂದೂ ಸಾರ್ವಜನಿಕರು ದೂರಿದ್ದಾರೆ.
ರಸ್ತೆಯಲ್ಲಿರುವ ಗುಂಡಿಗಳು ನಿತ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿರುವು ದಲ್ಲದೆ ವಾಹನ ಸವಾರರಿಗೆ ವಾಹನ ದುರಸ್ತಿಗೂ ಹೆಚ್ಚುವರಿ ಹಣ ವ್ಯಯಿಸಬೇಕಾದ ಸಂದಿಗ್ಧತೆಯನ್ನು ತಂದಿಟ್ಟಿದೆ.