ನವದೆಹಲಿ: 17ನೇ ಲೋಕಸಭೆಯ ಐದು ವರ್ಷಗಳಲ್ಲಿ 1,354 ಗಂಟೆಗಳ ಕಾಲ ಕಲಾಪ ನಡೆದಿದೆ. ಆದರೆ ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ ಒಟ್ಟು ಒಂಬತ್ತು ಸಂಸದರು ಒಂದೂ ಮಾತು ಆಡಿಲ್ಲ, ಯಾವುದೇ ಚರ್ಚೆಯಲ್ಲೂ ಭಾಗವಹಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Tragedy: ಅಪಘಾತವಾಗಿ 9 ದಿನಗಳ ಬಳಿಕ ಚೆನ್ನೈ ಮಾಜಿ ಮೇಯರ್ ಪುತ್ರನ ಶವ ನದಿಯಲ್ಲಿ ಪತ್ತೆ
ಕರ್ನಾಟಕದ ಸಂಸದರಾದ ಬಿಎನ್ ಬಚ್ಚೇಗೌಡ, ಅನಂತ ಕುಮಾರ್ ಹೆಗಡೆ, ವಿ.ಶ್ರೀನಿವಾಸ್ ಪ್ರಸಾದ್ ಮತ್ತು ರಮೇಶ್ ಜಿಗಜಿಣಗಿ ಹೆಸರು ಪಟ್ಟಿಯಲ್ಲಿದ್ದು, ಇನ್ನುಳಿದಂತೆ ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್, ಅತುಲ್ ರಾಯ್, ಪ್ರದಾನ್ ಬರುವಾ ಮತ್ತು ದಿಬ್ಯೇಂದು ಅಧಿಕಾರಿ ಸೇರಿದಂತೆ ಒಂಬತ್ತು ಸಂಸದರು ಒಂದೂ ಮಾತನಾಡಿಲ್ಲ ಎಂದು ಲೋಕಸಭಾ ಸಚಿವಾಲಯದ ಮೂಲಗಳು ಹೇಳಿವೆ.
ಮೂವರು ಸಂಸದರು ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ, ಆದರೆ ಉಳಿದ ಆರು ಸಂಸದರು ಕಲಾಪದಲ್ಲಿ ಭಾಗಿಯಾಗಿದ್ದರು. ಒಟ್ಟು ಒಂಬತ್ತು ಸಂಸದರ ಪೈಕಿ ಆರು ಮಂದಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದು, ಇಬ್ಬರು ತೃಣಮೂಲ ಕಾಂಗ್ರೆಸ್, ಒಬ್ಬರು ಬಿಎಸ್ ಪಿ ಎಂದು ವರದಿ ವಿವರಿಸಿದೆ.
ಅಧಿಕಾರಿ, ಬಚ್ಚೇಗೌಡ, ಬರುವಾ, ಡಿಯೋಲ್, ಹೆಗಡೆ, ಶ್ರೀನಿವಾಸ್ ಪ್ರಸಾದ್ ಒಂದು ಮಾತನ್ನು ಆಡಿಲ್ಲ, ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. 17ನೇ ಲೋಕಸಭಾದ ಅಂಕಿಅಂಶದ ಪ್ರಕಾರ, ಐದು ವರ್ಷಗಳ ಅಧಿವೇಶನದಲ್ಲಿ 222 ಮಸೂದೆಗಳಿಗೆ ಅಂಗೀಕಾರ ದೊರಕಿದೆ. 1,116 ಪ್ರಶ್ನೆಗಳಿಗೆ ಸಚಿವರುಗಳು ಮೌಖಿಕವಾಗಿ ಉತ್ತರ ನೀಡಿದ್ದು, ಶೂನ್ಯ ವೇಳೆಯಲ್ಲಿ 5,568 ವಿಷಯಗಳ ಬಗ್ಗೆ ಧ್ವನಿ ಎತ್ತಲಾಗಿತ್ತು ಎಂದು ತಿಳಿಸಿದೆ.