ನಿಡಗುಂದಿ: “ಅದ್ಯಾವ್ದೊ ಕೋವಿಡ್ ರೋಗ ಬಂದೈತೆಂತ್ರಿ, ಅದಕ್ಕ ಎಲ್ಲ ಸಂತಿ ಪ್ಯಾಟಿ ಬಂದ್ ಮಾಡ್ಯಾರ, ಊರಾಗ ಅಡ್ಡಾಡಿ ಮಾರೂನಂದ್ರ ಅದೂ ಆಗ್ವಲ್ದು. ಇದನ್ನ ನಂಬಿ ಹೊಟ್ಟಿ ತುಂಬಿಸಿಕೊಳ್ಳಾವ್ರು ನಾವು. ಈಗ ಮಾಡಿಟ್ಟ ಮಾಲ ಹಂಗ ಉಳದಾವ್, ಕೈಯಾಗಿನ ಕೆಲಸಾ ನಂಬಿ ಸಾಲ ಮಾಡಿವ್ರಿ ಈಗ ಏನ್ ಮಾಡಬೇಕಂತ ಗೊತ್ತಾಗವಲ್ಲದ್ರಿ…” ಇದು ಪಟ್ಟಣದ ಮೇದಾರ ಕುಟುಂಬಗಳ ಆರ್ಥನಾದ.
ಕೋವಿಡ್ ಲಾಕ್‌ಡೌನ್ ಘೋಷಿಸಿದ ನಂತರ ನಿಡಗುಂದಿ ಸೇರಿ ತಾಲೂಕಿನ ವಿವಿಧೆಡೆ ಮೇದಾರ ಕುಟುಂಬಗಳು ವ್ಯಾಪಾರ, ವಹಿವಾಟಿಲ್ಲದೇ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಮೇದಾರರು ಕೃಷಿಕರಿಗೆ ಬೇಕಾದ ಧಾನ್ಯ ಸಂಗ್ರಹದ ಬಿದಿರಿನ ಬುಟ್ಟಿ, ರೊಟ್ಟಿ ಹಾಕಲು ಕೆರೆಸಿ, ಧಾನ್ಯ ಸ್ವಚ್ಚ ಮಾಡಲು ಮರ, ಹೂವಿನ ಬುಟ್ಟಿ, ಮದುವೆ ಕಾರ್ಯದ ಭಾಸಿಂಗ ಬುಟ್ಟಿ ಸೇರಿದಂತೆ ಮುಂತಾದವುಗಳನ್ನು ಮಹಿಳೆಯರು ಮನೆಯಲ್ಲಿಯೇ ಹೆಣೆಯುತ್ತಾರೆ. ಪುರುಷರು ಮನೆ ಕಟ್ಟಡಕ್ಕೆ ಬೇಕಾದ ಏಣಿ ತಯಾರಿಸುತ್ತಾರೆ. ಇವುಗಳ ಮಾರಾಟಕ್ಕೆ ವಾರದ ಸಂತೆ, ಜಾತ್ರಾ ಮಹೋತ್ಸವಗಳಲ್ಲಿ ಮಾರುತ್ತಾರೆ. ಸಂತೆಯಲ್ಲಿ ಈ ವಸ್ತುಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ, ಲಾಕ್ ಡೌನ್‌ನಿಂದಾಗಿ ವಾರದ ಸಂತೆ, ಜಾತ್ರಾ ಮಹೋತ್ಸವ ನಿರ್ಬಂಧಿಸಲಾಗಿದ್ದು, ಮೇದಾರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
ಪ್ರತಿ ಜಾತ್ರೆಯಲ್ಲಿ ಹತ್ತಾರು ಸಾವಿರ ವ್ಯಾಪಾರ ನಡೆಸುವ ಜತೆಗೆ ವಾರದ ಸಂತೆಯಲ್ಲಿ 1000 ರೂ.ವರೆಗೆ ದುಡಿಮೆ ಮಾಡುತ್ತಿದ್ದ ಮೇದಾರ ಕುಟುಂಬಗಳ ಅನ್ನವನ್ನು ಕೋವಿಡ್ ಕಿತ್ತುಕೊಂಡಿದೆ. ಜಾತ್ರೆಯಲ್ಲಿ ಮಾರಾಟ ಮಾಡಲು ತಯಾರಿಸಿದ ಹಲವಾರು ವಸ್ತುಗಳೆಲ್ಲ ಮನೆಯಲ್ಲಿ ಉಳಿದಿವೆ. ಕಳೆದ ಒಂದು ತಿಂಗಳಿಂದ ಯಾವುದೇ ವಹಿವಾಟು ಇಲ್ಲದ ಪರಿಣಾಮ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಮೇದಾರರು ಅಳಲು ತೋಡಿಕೊಂಡಿದ್ದಾರೆ.
ಬಿದಿರು ತಂದು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ನಮ್ಮ ಜೀವನ ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಜಾತ್ರೆ ಸೇರಿದಂತೆ ವಾರದ ಸಂತೆಗಳಲ್ಲಿ ನಾವು ತಯಾರಿಸಿದ ವಸ್ತಗಳು ಮಾರಾಟವಾಗುತ್ತವೆ. ಆದರೆ, ಕಳೆದ ಹಲವಾರು ದಿನಗಳಿಂದ ಜಾತ್ರೆ, ಸಂತೆ ರದ್ದಾದ ಪರಿಣಾಮ ವಸ್ತುಗಳು ಮಾರಾಟವಾಗಿಲ್ಲ. ಬಿದಿರಿನ ಹಣ ಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ತಿಪ್ಪವ್ವ ಮೇದಾರ
ಕರಕುಶಲ ವಸ್ತು ತಯಾರಿಸಿ ಮಾರಾಟ ಮಾಡುವ ಮೇದಾರ ಕುಟುಂಬಗಳು ಲಾಕ್ ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿವೆ. ಸರಕಾರ ಮೇದಾರ ಕುಟುಂಬಗಳಿಗೆ ಸಹಾಯ ನೀಡಬೇಕು.
ಸಿಂದೂರ ಬೈರವಾಡಗಿ,
ದಲಿತ ಮುಖಂಡ
ಮುತ್ತು ಕುಪ್ಪಸ್ತ