ಕಕ್ಕೇರಾ: ಕೃಷ್ಣಾನದಿ ಪ್ರವಾಹದಿಂದ ಸಂಕಷ್ಟದಲ್ಲಿರುವ ನೀಲಕಂಠರಾಯನ ಗಡ್ಡಿ ಜನರಿಗೆ ಬೋಟ್ ಮೂಲಕ ಸೋಮವಾರ ಪಡಿತರ ಧಾನ್ಯ ವಿತರಿಸಲಾಯಿತು.
ಕೃಷ್ಣಾನದಿಯಲ್ಲಿ ಕಳೆದ ಐದು ದಿನಗಳಿಂದಲೂ ಬೋರ್ಗರಿಯುವ ಗಡ್ಡಿ ಜನರಿಗೆ ಸಂಪರ್ಕ ಕಡಿತಗೊಂಡು ಭಾರಿ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸುರಪುರ ತಹಶೀಲ್ದಾರ್ ಸುರೇಶ ಅಂಕಲಗಿ ಅವರೊಂದಿಗೆ ಅಧಿಕಾರಿಗಳು ಬೋಟ್‌ನೊಂದಿಗೆ ತೆರಳಿ ಐದು ಕ್ವಿಂಟಲ್ ಅಕ್ಕಿ ಮತ್ತು 35 ಪಾಕೇಟ್ ತೊಗರಿ ಬೇಳೆ ವಿತರಿಸಿದರು. ಅಲ್ಲದೇ ಜನರ ಸಮಸ್ಯೆ ಆಲಿಸಿದರು.
ಗಡ್ಡಿಯಲ್ಲಿಯೇ ಉಳಿದ ಮಾಸ್ತರ್: ಐದು ದಿನಗಳಿಂದ ಪ್ರವಾಹ ಆವರಿಸಿದ್ದರಿಂದ ಅಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಜೆ ಘೋಷಿಸಲಾಗಿತ್ತು. ಆದರೆ ಅಲ್ಲಿನ ಶಾಲೆ ಶಿಕ್ಷಕ ಬಸನಗೌಡ ಎಂಬವರು ಕೃಷ್ಣಾನದಿಯಲ್ಲಿ ಬೋಟ್‌ನೊಂದಿಗೆ ಸೋಮವಾರ ತೆರಳಿ ನೀಲಕಂಠರಾಯನ ಗಡ್ಡಿಯಲ್ಲಿಯೇ ಉಳಿದು ಮಕ್ಕಳಿಗೆ ಶಿಕ್ಷಣ ಕಲಿಸುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ ಪ್ರವಾಹ ಬಂದಾಗೊಮ್ಮೆ ಶಾಲೆ ರಜೆ ಘೋಷಿಸಬೇಕಿತ್ತು. ಆದರೆ ಈ ಭಾರಿ ಶಿಕ್ಷಕ ಬಸನಗೌಡ ಅವರು ದೃಢ ಮನಸ್ಸು ಮಾಡಿ ನೀಲಕಂಠರಾಯನ ಗಡ್ಡಿಯಲ್ಲಿಯೇ ವಾಸ್ತವ್ಯ ಮಾಡಿ ಶಿಕ್ಷಣ ಕಲಿಕೆ ಮುಂದುವರಿಸುವುದಾಗಿ ಒಪ್ಪಿಕೊಂಡಿದ್ದಾರೆ.
ನಾಳೆ ಮತ್ತೆ ನದಿಗೆ ಬೋಟ್: ಬುಧವಾರ ಕಕ್ಕೇರಾದಲ್ಲಿ ಸಂತೆ ನಡೆಯ್ತುದೆ. ಅಲ್ಲಿನ ಜನರಿಗೆ ಇನ್ನಿತರ ವಸ್ತುಗಳ ಖರೀದಿಗಾಗಿ
ಕೃಷ್ಣಾನದಿಯಲ್ಲಿ ಬುಧವಾರ ಮತ್ತೆ ಬೋಟ್ ಬಿಡಲಾಗುವುದು ಎಂದು ಸುರಪುರ ತಹಶೀಲ್ದಾರ ಸುರೇಶ ಅಂಕಲಗಿ ತಿಳಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ ಹಾಗೂ ಸಿಬ್ಬಂದಿ ಮದನಸಾಬ್ ಇದ್ದರು.