ಬಾಲಸೋರ್ : ಹನಿಟ್ರ್ಯಾಪ್ ಮೂಲಕ ವ್ಯಕ್ತಿಯೊಬ್ಬನಿಂದ 30 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ನೈಜೀರಿಯನ್ ಪ್ರಜೆಯೊಬ್ಬನನ್ನು ಒಡಿಶಾದ ಪೊಲೀಸರ ಸೈಬರ್ ವಿಭಾಗ ನವದೆಹಲಿಯಲ್ಲಿ ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ರಾಷ್ಟ್ರ ರಾಜಧಾನಿಯ ಕಿಶನ್‌ಗಢ್ ಪ್ರದೇಶದಲ್ಲಿ ನೆಲೆಸಿದ್ದು, ವಿದೇಶಿ ಮಹಿಳೆಯರ ಹೆಸರಿನಲ್ಲಿ ಸೃಷ್ಟಿಸಿರುವ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಎಂದು ಬಾಲಸೋರ್ ಸೈಬರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ಮಿನಾ ಬಿಂಧನಿ ಹೇಳಿದ್ದಾರೆ.
ಬಂಧಿತನಿಂದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಹಲವಾರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ . ಹನಿಟ್ರ್ಯಾಪ್ ಮೂಲಕ ವಿದೇಶಿಗರು ವಂಚಿಸಿದ್ದಾರೆ ಎಂದು ಈ ವರ್ಷದ ಜನವರಿಯಲ್ಲಿ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸ್ ಠಾಣೆ ಸಿಬಂದಿ ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಯುಕೆ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದೇನೆ ಮತ್ತು ನಂತರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ ಎಂದು ವ್ಯಕ್ತಿ ಆರೋಪಿಸಿದ್ದಾರೆ.
“ಮಹಿಳೆ ಚಿನ್ನದ ಬಿಸ್ಕತ್ತುಗಳು, ಬೆಲೆಬಾಳುವ ವಾಚ್ ಮತ್ತು ಮೊಬೈಲ್ ಸೇರಿದಂತೆ ಅಪಾರ ಪ್ರಮಾಣದ ಉಡುಗೊರೆಗಳನ್ನು ಕಳುಹಿಸಿದ್ದರು. ಉಡುಗೊರೆಗಳು ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ, ಕಸ್ಟಮ್ಸ್ ಅಧಿಕಾರಿ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಉಡುಗೊರೆಗಳನ್ನು ಸ್ವೀಕರಿಸಲು ದಾಖಲೆಗಳನ್ನು ನೀಡುವಂತೆ ಕೇಳಿದರು. ಅದರಂತೆ 30 ಲಕ್ಷ ರೂ.ಗಳನ್ನು ಕಂತುಗಳಲ್ಲಿ ಪಾವತಿಸಿದ್ದರೂ ಉಡುಗೊರೆಗಳನ್ನು ಸ್ವೀಕರಿಸಲಾಗಲಿಲ್ಲ’ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯುಕೆ ಮಹಿಳೆಯ ನಕಲಿ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ನೈಜೀರಿಯನ್ ವ್ಯಕ್ತಿ 30 ಲಕ್ಷ ರೂಪಾಯಿ ವಂಚಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸೈಬರ್ ಪೊಲೀಸ್ ಠಾಣೆ ಐಐಸಿ ತಿಳಿಸಿದೆ. ವ್ಯಕ್ತಿಯಿಂದ ಹಣವನ್ನು ಠೇವಣಿ ಮಾಡಿದ ಬ್ಯಾಂಕ್ ಖಾತೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯನ್ನು ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಬಾಲಸೋರ್‌ಗೆ ಕರೆತರಲಾಗಿದ್ದು, ಎಸ್‌ಡಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.