ಮುಂಬಯಿ: ತಾಂತ್ರಿಕ ಕಾರಣಗಳಿಂದಾಗಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮೂರು ಗಂಟೆಗಳ ಕಾಲ ವಹಿವಾಟು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಕೆಲ ಕಾಲ ಹೂಡಿಕೆದಾರರು ಯಾವುದೇ ತಾಜಾ ಮಾಹಿತಿಗಳಿಲ್ಲದೆ ಕಂಗಾಲಾಗಿದ್ದ ಸ್ಥಿತಿ ಉಂಟಾಗಿತ್ತು. ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ವರದಿ ಕೇಳಿದ್ದು, ಹ್ಯಾಕಿಂಗ್ ಸಾಧ್ಯತೆಯನ್ನು ಅದು ತಳ್ಳಿ ಹಾಕಿದೆ. ಐಪಿಒ ಆಧಾರಿತ ಎಕ್ಸ್ ಚೇಂಜ್ ಆಗಿರುವ ಎನ್‌ಎಸ್‌ಇ ಆಡಳಿತ ಮಂಡಳಿ ಗ್ರಾಹಕರಿಗೆ ಉಂಟಾಗಿರುವ ತೊಂದರೆಗೆ ಕ್ಷಮೆ ಯಾಚಿಸಿದೆ. ಇದೆಲ್ಲ ಸಮಸ್ಯೆ ಹೊರತಾಗಿಯೂ ಎನ್‌ಎಸ್‌ಇ ದಿನದ ಮುಕ್ತಾಯಕ್ಕೆ ಮೊದಲ ಬಾರಿಗೆ 9,700ರ ಸೂಚ್ಯಂಕದಲ್ಲಿ ಮುಕ್ತಾಯವಾಯಿತು.
ವಾರದ ಆರಂಭದ ದಿನವಾಗಿರುವ ಸೋಮವಾರ ಬೆಳಗ್ಗಿನಿಂದಲೇ ಗ್ರಾಹಕರಿಗೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಬೆಂಗಳೂರು, ಮುಂಬಯಿ, ಹೊಸದಿಲ್ಲಿ ಸಹಿತ ಪ್ರಮುಖ ನಗರ, ಪಟ್ಟಣಗಳಲ್ಲಿ ನೇರವಾಗಿ ಎನ್‌ಎಸ್‌ಇ ಜತೆ ವಹಿವಾಟಿಗೆ ತೊಂದರೆ ಉಂಟಾಗಿತ್ತು. ನಿಗದಿತ ಕಂಪನಿಗಳ ಷೇರುಗಳ ದರ ಗ್ರಾಹಕರು ಮಾರಲು ಉದ್ದೇಶಿದ್ದ ದರ ಮತ್ತು ಮಾರಾಟಗೊಂಡ ದರ ಬೇರೆ ಬೇರೆಯಾಗಿತ್ತು. ಮಧ್ಯಾಹ್ನ 12.30ರ ವೇಳೆಗೆ ತಾಂತ್ರಿಕ ಸಮಸ್ಯೆ ಪರಿಹಾರವಾಗಿ ಮತ್ತೆ ವಹಿವಾಟು ಆರಂಭವಾಯಿತು.
ಇತ್ತೀಚೆಗಷ್ಟೇ ಎನ್‌ಎಸ್‌ಇ 10 ಸಾವಿರ ಕೋಟಿ ರೂ.ಮೌಲ್ಯದಷ್ಟು ಐಪಿಒ ಹೊರಡಿಸಲು ಮುಂದಾಗಿದ್ದರೂ ಅದಕ್ಕೆ ಸೆಬಿ ಆಕ್ಷೇಪ ವ್ಯಕ್ತಪಡಿಸಿತ್ತು.
ದಾಖಲೆ ಏರಿಕೆ: ಈ ನಡುವೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನ ಸಂವೇದಿ ಸೂಚ್ಯಂಕ 31,595ಕ್ಕೆ ಏರಿಕೆ ಯಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇತ್ತೀಚೆಗೆ ಘೋಷಣೆ ಯಾಗಿರುವ ತ್ತೈಮಾಸಿಕ ವರದಿಗಳ ಹಿನ್ನೆಲೆಯಲ್ಲಿ ಷೇರು ಪೇಟೆ ಧನಾತ್ಮಕವಾಗಿಯೇ ಸ್ಪಂದಿಸಿದೆ. ಜೂ.22ರಂದು ಬಿಎಸ್‌ಇ ಸೂಚ್ಯಂಕ 31,522ಕ್ಕೆ ಏರಿಕೆಯಾಗಿದ್ದು ಇತ್ತೀಚಿನ ದಾಖಲೆ.