ಬೆಂಗಳೂರು: ನಿಷೇಧಿತ ಸಿಮಿ ಸಂಘಟನೆ ಕಾರ್ಯಕರ್ತರು ಇದೀಗ ಕರಾವಳಿ ಭಾಗದಲ್ಲಿ ಕೆಎಫ್ಡಿ ಮತ್ತು ಪಿಎಫ್ಐ
ಹೆಸರಿನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆ ಬೇರೂರಲು ಸಹಕಾರ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ
ರಾಷ್ಟ್ರೀಯ ತನಿಖಾ ದಳದ ಕಚೇರಿ ತೆರೆಯುವಂತೆ ಮತ್ತೆ ಕೇಂದ್ರ ಗೃಹ ಸಚಿವರನ್ನು ಕೋರಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ಐಸಿಸ್ ಸಂಘಟನೆ ಬೇರೂರುತ್ತಿದೆ ಎಂಬ ವರದಿ ಕುರಿತಂತೆ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಐಸಿಸ್ ಸಕ್ರಿಯವಾಗಿದೆ. ಬಿ.ಸಿ.ರೋಡ್ ನಲ್ಲಿ ಅಡ್ಡೆ ಮಾಡಿ ಕೊಂಡಿದ್ದಾರೆಂಬ ವರದಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಕಳೆದ 2-3 ವರ್ಷಗಳಿಂದ ಪಿಎಫ್ಐ ಮತ್ತು ಕೆಎಫ್ಡಿ ಹೆಸರಲ್ಲಿ ನಿಷೇಧಿತ ಸಿಮಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, ಇವರೇ ಸಿಮಿ ಸಂಘಟನೆ ಬೇರೂರಲು ನೆರವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವುದರಿಂದ ಆ ಸಂಘಟನೆಗಳನ್ನು ನಿಷೇಧಿಸಿ, ಕಾರ್ಯಕರ್ತರನ್ನು ಬಂಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ತೆರೆಯುವಂತೆ ಕೇಂದ್ರ ಗೃಹ ಸಚಿವರಿಗೆ ಮತ್ತೆ ಪತ್ರ ಬರೆಯಲಾಗುವುದು. ಜತೆಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಸಂಸದ ಪ್ರತಾಪ್ ಸಿಂಹ ಗೆಲ್ಲಲು ಕೆಎಫ್ಡಿ, ಪಿಎಫ್ಐ ಸಂಘಟನೆಗಳ ನೆರವು ಪಡೆದಿದ್ದಾರೆ ಎಂದು ಸಚಿವ ಖಾದರ್ ಮಾಡಿದ ಆರೋಪದ ಬಗ್ಗೆ ಉತ್ತರಿಸಿದ ಅವರು, ಯಾರೇ ಆಗಲಿ, ಪ್ರತಾಪ್ ಸಿಂಹ ಈ ಸಂಘಟನೆಗಳ ನೆರವು ಪಡೆದಿದ್ದಾರೆ ಎಂದರೆ ಅಂಥವರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು ಎಂದು ವ್ಯಂಗ್ಯವಾಡಿದರು.