Advertisement
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ್ ಕಚೇರಿಗೆ ಬೈಕ್ ರ್‍ಯಾಲಿ ಮೂಲಕ ಆಗಮಿಸಿದ ರೈತರು ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರೈತರೊಂದಿಗೆ ಚರ್ಚಿಸದೆ, ಬಾಕಿ ಹಣ ಕೊಡಿಸಲು ಕ್ರಮ ಕೈಗೊಳ್ಳದೆ ಕಾರ್ಖಾನೆ ಆರಂಭಕ್ಕೆ ಮುಂದಾಗಿರುವುದು ಸರಿಯಲ್ಲ. ಒಂದುವೇಳೆ ಈಗ ಬಾಕಿ ನೀಡದೆ ಕಾರ್ಖಾನೆ ಆರಂಭಿಸದರೆ ನಮ್ಮ ಬಾಕಿ ನಮಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮುತುವರ್ಜಿ ವಹಿಸಿ ರೈತರ ಹಿತ ಕಾಯಬೇಕು. ಈ ಹಂಗಾಮಿನ ದರ ನಿಗದಿ ಬಳಿಕವೇ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಯಾರದೋ ಹಿತಾಸಕ್ತಿಗಾಗಿ ತರಾತುರಿಯಲ್ಲಿ ಕಾರ್ಖಾನೆಗಳನ್ನು ಆರಂಭಿಸಿದರೆ ರೈತರಿಗೆ ಅನ್ಯಾಯವೆಸಗಿದಂತಾಗುತ್ತದೆ. ಸರ್ಕಾರ ಕೂಡಲೇ ಆದೇಶ ಹಿಂಪಡೆದು ರೈತರ ಬಾಕಿ ಮೊತ್ತ ಚುಕ್ತಾ ಆದಬಳಿಕ ಕಾರ್ಖಾನೆ ಆರಂಭಕ್ಕೆ ಮುಂದಾಗಬೇಕು ಎಂದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿನ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಹೋರಾಟಗಾರರ ಸಭೆಯನ್ನು ಕೂಡಲೇ ಕರೆಯುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಹೋರಾಟಗಾರರ ಸಭೆ ಕರೆಯಬೇಕು. ನ.8ರೊಳಗೆ ಎಲ್ಲ ಬಾಕಿ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಉಪವಿಭಾಗಾಧಿಕಾರಿ ನ.7ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದರು.
ಈ ಹಂತದಲ್ಲಿ ಮಾತನಾಡಿದ ರೈತಮುಖಂಡರು ನೀವು ನಿಮ್ಮ ಸಭೆಯನ್ನು ಮುಗಿಸಿಕೊಂಡು ಬನ್ನಿ ಅಲ್ಲಿಯವರೆಗೆ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಸಭೆಯಲ್ಲಿನ ನಿರ್ಧಾರದ ಮೇಲೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ತಮ್ಮ ಪ್ರತಿಭಟನೆ ಮುಂದುವರಿಸಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ವೆಂಕಣ್ಣ ಮಳಲಿ, ಸುಭಾಷ ಶಿರಬೂರ, ಹನಮಂತ ನಬಾಬ, ಸುರೇಶ ಚಿಂಚಲಿ, ಹನಮಂತ ನಬಾಬ ಸೇರಿದಂತೆ ಇತರರು ಇದ್ದರು.
ಡಿವೈಎಸ್ಪಿ ಶಾಂತವೀರ ಈ, ಸಿಪಿಐ ಮಹಾದೇವ ಶರಹಟ್ಟಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಹೋರಾತ್ರಿ ಪ್ರತಿಭಟನೆ : ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಪ್ರತಿಭಟನೆ ಅಹೋರಾತ್ರಿವರೆಗೆ ಸಾಗಿದೆ. ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಪಟ್ಟು ಹಿಡಿದ ಕಾರಣ ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ಸಂಧಾನ ಸಭೆ ವಿಫಲಗೊಂಡಿದೆ. ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿನ ನಿರ್ಣಯಗಳ ಮೇಲೆ ಪ್ರತಿಭಟನೆ ಸ್ವರೂಪ ಯಾವ ಹಂತ ತಲುಪಲಿದೆ ಎಂದು ಗೊತ್ತಾಗಲಿದೆ.
ಯಾರದೋ ಹಿತಾಸಕ್ತಿ ಕಾಪಾಡಲು ಸಕ್ಕರೆ ಕಾರ್ಖಾನೆ ಆರಂಭಕ್ಕೆ ಆದೇಶ ನೀಡಿರುವ ಸಕ್ಕರೆ ಸಚಿವರ ನಡೆ ಸರಿಯಲ್ಲ. ಒಂದು ಭಾಗದಲ್ಲಿ ಮಳೆಯಿಂದ ಕಬ್ಬು ಹಾನಿಯಾಗುತ್ತದೆ ಎಂಬ ಕುಂಟು ನೆಪ ಹೇಳಿ ರಾಜ್ಯದ ಎಲ್ಲ ಕಾರ್ಖಾನೆಗಳ ಆರಂಭಕ್ಕೆ ಮುಂದಾಗಿರುವ ನೀವು, ಮೊದಲು ನಮ್ಮ ಭಾಗದಲ್ಲಿ ಮಳೆಯಿಂದ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರ ನೀಡಿ.– ಬಸವಂತಪ್ಪ ಕಾಂಬಳೆ ರೈತ ಸಂಘದ ಜಿಲ್ಲಾಧ್ಯಕ್ಷ