ಹೊಸದಿಲ್ಲಿ: ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳಿಗೆ ಹವಾಲಾ ಮೂಲಕ ಹಣಕಾಸು ಪೂರೈಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಜಾಗತಿಕ ಭಯೋತ್ಪಾದಕ, ಹಿಜ್ಬುಲ್ ಮುಜಾಹಿದೀನ್ ಸ್ಥಾಪಕ ಸೈಯದ್ ಸಲಾಹುದ್ದೀನ್‌ನ ಪುತ್ರ ಸೈಯದ್ ಶಾಹಿದ್ ಯೂಸೂಫ್(42)ನನ್ನು ಮಂಗಳವಾರ ಬಂಧಿಸಿದೆ.
2011ರಲ್ಲಿ ತನ್ನ ತಂದೆ, ಉಗ್ರ ಸಲಾಹುದ್ದೀನ್‌ನಿಂದ ಹಣವನ್ನು ಪಡೆದು ಉಗ್ರರಿಗೆ ನೀಡಿದ ಆರೋಪದ ಮೇರೆಗೆ ಶಾಹಿದ್‌ಗೆ ಸಮನ್ಸ್ ಜಾರಿ ಮಾಡಿದ್ದ ಎನ್‌ಐಎ, ವಿಚಾರಣೆ ಬಳಿಕ ಆತನನ್ನು ಬಂಧಿಸಿದೆ. ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಾಹಿದ್ ಯೂಸುಫ್ ಸದ್ಯ ಜಮ್ಮು-ಕಾಶ್ಮೀರದ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಬುಧವಾರ ಈತನನ್ನು ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಪ್ರಕರಣದ ಮತ್ತೂಬ್ಬ ಆರೋಪಿಯಾಗಿರುವ ಎಜಾಝ್ ಅಹ್ಮದ್ ಭಟ್ ಎಂಬಾತ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಅಮೆರಿಕ ಮೂಲಕ ಅಂತಾರಾಷ್ಟ್ರೀಯ ವೈರ್ ಟ್ರಾನ್ಸ್‌ಫರ್ ಕಂಪೆನಿಯ ಮೂಲಕ ಈತ ಶಾಹಿದ್ ಯೂಸುಫ್ಗೆ ಹಣ ರವಾನಿಸುತ್ತಿದ್ದ. ಹಣ ವರ್ಗಾವಣೆಯ ಕೋಡ್ ಅನ್ನು ಹಂಚಿಕೊಳ್ಳುವ ಉದ್ದೇಶದಿಂದ ಅಹ್ಮದ್ ಭಟ್ ನಿರಂತರವಾಗಿ ಶಾಹಿದ್‌ನನ್ನು ಸಂಪರ್ಕಿಸುತ್ತಿದ್ದ. ಈವರೆಗೆ ಶಾಹಿದ್ ವೈರ್ ಟ್ರಾನ್ಸ್‌ಫರ್ ಮೂಲಕ 4.5 ಲಕ್ಷ ರೂ.ಗಳನ್ನು ಸ್ವೀಕರಿಸಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ.
ಎನ್‌ಐಎ 2011ರಲ್ಲಿ ಪ್ರಕರಣ ದಾಖಲಿಸಿ ಕೊಂಡಿತ್ತು. ಪಾಕ್ ಪರ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಯ ಆಪ್ತ ಸಹಚರನಾದ ಜಿಎಂ ಭಟ್ ಸೇರಿದಂತೆ ಆರು ಜನರ ವಿರುದ್ಧ ಎನ್‌ಐಎ ಈಗಾಗಲೇ ಎರಡು ಆರೋಪಪಟ್ಟಿ ಸಲ್ಲಿಕೆ
ಮಾಡಿದೆ.