Advertisement

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಶೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

03:26 PM Nov 04, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ ಜಾಲ ದಿನೇ ದಿನೇ ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ಸುಶಿಕ್ಷಿತರೇ ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ. ಇದೀಗ ಮೀಸೋ ಆ್ಯಪ್‌ ಕಂಪನಿ ಹೆಸರಿನ ಲಕ್ಕಿ ಡ್ರಾ ಹೆಸರಿನಲ್ಲಿ ಜಿಲ್ಲೆಯ ದಂಪತಿಗೆ ಬರೋಬ್ಬರಿ ಅರ್ಧ ಕೋಟಿ ಪಂಗನಾಮ ಹಾಕಲಾಗಿದೆ. ಹೊಲ ಮಾರಿದ ಹಣ ಕಳೆದುಕೊಂಡ ಆ ದಂಪತಿ, ಪೊಲೀಸ್‌ ಠಾಣೆಗೆ ಅಲೆದು ನಮ್ಮ ಹಣ ಮರಳಿ ಕೊಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

Advertisement

ಹೌದು. ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಕರಕುಶಲಕರ್ಮಿ ದಂಪತಿ ಮೀಶೋ ಆ್ಯಪ್‌ ಹೆಸರಿನಲ್ಲಿ ಆದ ಮೋಸದಿಂದ ಸದ್ಯ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 52,67,724 ರೂ. ಕಳೆದುಕೊಂಡಿದ್ದಾರೆ.

ಮನೆಗೇ ಬಂದಿತ್ತು ಕೊರಿಯರ್‌!: ಆನ್‌ಲೈನ್‌ ವಂಚಕರು, ಹಣ ದೋಚಲು ಹಲವು ಕಳ್ಳ ದಾರಿ  ಹಿಡಿಯುತ್ತಾರೆ. ಎಪಿಕ್‌ ಲಿಂಕ್‌, ಫೋನ್‌ ಕರೆ, ಇ ಮೇಲೆ ಹೀಗೆ ವಿವಿಧ ರೀತಿಯ ತಂತ್ರಗಳನ್ನು ವಂಚನೆಗೆ ಬಳಸಿಕೊಂಡರೆ ಈ ದಂಪತಿಗೆ ಅವರ ಮನೆಯ ವಿಳಾಸಕ್ಕೆ ಕೋರಿಯರ್‌ವೊಂದನ್ನು ಕಳುಹಿಸಿ ಬಲೆಗೆ ಬೀಳಿಸಿದ್ದಾರೆ.

ಈ ದಂಪತಿ, ಬರೋಬ್ಬರಿ 52 ಲಕ್ಷ ಕಳೆದುಕೊಳ್ಳುವವರೆಗೂ ನಾವು ಮೋಸದ ಜಾಲಕ್ಕೆ ಬಿದ್ದಿದ್ದೇವೆ ಎಂಬುದೇ ಅರಿವಿಗೆ ಬಂದಿಲ್ಲ. ವಂಚಕರು ಹೇಳಿದಂತೆ ಹಣ ಹಾಕುತ್ತಲೇ ಹೋಗಿದ್ದಾರೆ. ಕೊನೆಗೆ ಸ್ನೇಹಿತರ ಬಳಿ ಸಾಲ ಮಾಡಿಯೂ ಹಣ ಹಾಕಿದ್ದಾರೆ. ಅದೇ ಸ್ನೇಹಿತರ ಬಳಿ ಮತ್ತೆ ಮತ್ತೆ ಹಣ ಕೇಳಿದಾಗ ಈ ವಂಚನೆ ಬಯಲಾಗಿದೆ.

ಮೀಶೋ ಕಂಪನಿ ಹೆಸರಿನಲ್ಲಿ ಈ ದಂಪತಿ ಮನೆ ವಿಳಾಸಕ್ಕೆ ಕೋರಿಯರ್‌ ಬಂದಿತ್ತು. ನಮ್ಮ ಮೀಶೋ ಕಂಪನಿಯ 8ನೇ ವಾರ್ಷಿಕೋತ್ಸವ ನಿಮಿತ್ತ ಮೊದಲ ಬಹುಮಾನ 15 ಲಕ್ಷ ರೂ.ನಗದು, 2ನೇ ಬಹುಮಾನ ಐಶಾರಾಮಿ ಕಾರು ಇದೆ ಎಂದು ಅದರಲ್ಲಿ ನಮೂದಿಸಿತ್ತು. ನೀವು ನಮ್ಮ ಕಾಯಂ(ವಂಚನೆಗೆ ಒಳಗಾದ ಪತಿ-ಪತ್ನಿಯರಲ್ಲಿ ಪತ್ನಿ ಆಗಾಗ ಮೀಶೋ ಆ್ಯಪ್‌ ನಲ್ಲಿ ಗೃಹ ಬಳಕೆ ಹಾಗೂ ಮಹಿಳೆಯರಿಗೆ ಬೇಕಾಗುವ ಸಾಮಗ್ರಿ ಬುಕ್‌ ಮಾಡಿ ತರಿಸಿಕೊಳ್ಳುತ್ತಿದ್ದರು) ಗ್ರಾಹಕರಾಗಿದ್ದರಿಂದ ನಿಮ್ಮನ್ನು ಲಕ್ಕಿ ಡ್ರಾಗೆ ಆಯ್ಕೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಈ ನಂಬರ್‌ಗೆ ಸಂಪರ್ಕ ಮಾಡಿ ಎಂದು ಲೆಟರ್‌ನಲ್ಲಿ ಬರೆದಿತ್ತು. ಅದನ್ನು ನಂಬಿದ ದಂಪತಿ, ಮೋಸದ ಜಾಲಕ್ಕೆ ಬಿದ್ದಿದ್ದಾರೆ.

Advertisement

ಹೊಲ ಮಾರಿದ ಹಣ ಹೋಯ್ತು: ಕೋರಿಯರ್‌ ನ ಮೂಲಕ ಬಂದಿದ್ದ ಪತ್ರದಲ್ಲಿದ್ದ ಫೋನ್‌ ನಂಬರ್‌ಗಳಿಗೆ ದಂಪತಿಗಳೇ ಕರೆ ಮಾಡಿ ಹೀಗೆ ನಿಮ್ಮ ಕಂಪನಿಯಿಂದ ನಮಗೆ ಪತ್ರ ಬಂದಿದೆ. ನಮ್ಮನ್ನು ಲಕ್ಕಿ ಡ್ರಾಗೆ ಆಯ್ಕೆ ಮಾಡಿದ್ದಾಗಿ ತಿಳಿಸಿದ್ದು, ಆ ಕುರಿತು ವಿಚಾರಿಸಿದ್ದಾರೆ. ಆಗ ಕುರಿ ಹಳ್ಳಕ್ಕೆ ಬಿತ್ತು ಎಂಬಂತೆ, ಆ ಕಡೆಯಿಂದ ವಂಚಕರು ಹಲವು ಸುಳ್ಳು ಹೇಳಿದ್ದಾರೆ. ಮೀಶೋ ಕಂಪನಿಯಿಂದ ಆಯ್ಕೆಯಾಗಿದ್ದೀರಿ ಎಂಬಂತೆ ಬಿಂಬಿಸಿದ್ದಾರೆ. ಅದರಲ್ಲೂ ಮಹಿಳೆಯೊಂದಿಗೆ ಹೆಚ್ಚು ಮಾತಾಡಿದ್ದು, ನೀವು ನಮ್ಮ ಕಂಪನಿಯ ಕಾಯಂ ಗ್ರಾಹಕರು, ನಿಮಗೆ ಲಕ್ಕಿ ಡ್ರಾ ಹತ್ತಿದೆ ಎಂದು ನಂಬಿಸಿದ್ದಾರೆ. ಇದರಿಂದ ಖುಷಿಯಾದ ಮಹಿಳೆ ತನ್ನ ಪತಿಗೆ ಹೇಳಿದ್ದು, ಇಬ್ಬರೂ ಕೂಡಿ, ವಂಚಕರು ಹೇಳಿದಂತೆ ಕೇಳುತ್ತ ಹೋಗಿದ್ದಾರೆ. ಈ ವಂಚನೆ ಪ್ರಕರಣ ಕಳೆದ ಜನವರಿಯಿಂದ ಆರಂಭಗೊಂಡಿದ್ದು, ಎರಡು ದಿನಗಳ ಹಿಂದೆ ಬೆಳಕಿಗೆ ಬಂದಿದೆ.

ಹ್ಯಾಂಕಾಂಗ್ ನಲ್ಲಿ ಖಾತೆ: ಮೀಶೋ ಕಂಪನಿ ಲಕ್ಕಿ ಡ್ರಾಗೆ ಆಯ್ಕೆಯಾದ ನೀವು ಹ್ಯಾಂಕಾಂಗ್‌ ಬ್ಯಾಂಕ್‌ ಖಾತೆ ತೆರೆಯಬೇಕು. ಅದಕ್ಕಾಗಿ ನೀವು 15 ಸಾವಿರ ಹಾಕಬೇಕು ಎಂದು ತಿಳಿಸಿದ್ದಾರೆ. ಅದರಂತೆ ಮೊದಲಿಗೆ 15 ಸಾವಿರ ಹಾಕಿದ್ದಾರೆ. ಬಳಿಕ ವಿವಿಧ ರೀತಿಯ ತೆರಿಗೆ ಕಟ್ಟಬೇಕೆಂದು ತಿಳಿಸುತ್ತ ಪದೇ ಪದೇ ಹಣ ಹಾಕಿಸಿಕೊಂಡಿದ್ದಾರೆ.

ಅಲ್ಲಿಯವರೆಗೂ ಈ ದಂಪತಿಗೆ ನಾವು ಮೋಸಕ್ಕೆ ಒಳಗಾಗಿದ್ದೇವೆ ಎಂಬುದೇ ಗೊತ್ತಾಗಿಲ್ಲ. ಮುಖ್ಯವಾಗಿ ಇವರು ಹೊಲ ಮಾರಿದ ಹಣ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟಿದ್ದರು. ಆ ಹಣ ದ್ವಿಗುಣಗೊಂಡಿತ್ತು. ಅದೇ ಹಣವನ್ನು ಮೀಶೋ ಆ್ಯಪ್‌ ಕಂಪನಿ ಹೆಸರಿನ ಮೋಸದ ಜಾಲದಲ್ಲಿ ಕಳೆದುಕೊಂಡಿದ್ದಾರೆ.

ಬಯಲಿಗೆ ಬಂದಿದ್ದು ಹೇಗೆ?: ಕರಕುಶಲ ಕೆಲಸ‌ ಮಾಡಿಕೊಂಡಿರುವ ವ್ಯಕ್ತಿ, ಹೊಲ ಬಾರಿ ಎಫ್‌ಡಿ ಇಟ್ಟಿದ್ದ ಹಣ ಹಾಕಿದ ಬಳಿಕವೂ ವಂಚಕರು ಪದೇ ಪದೇ ಹಣ ಹಾಕಿದರೆ ನಿಮಗೆ ಹತ್ತಿರುವ ಲಕ್ಕಿ ಡ್ರಾ ಕಾರು ಕಳುಹಿಸುತ್ತೇವೆ ಎಂದು ಹೇಳಿದ್ದರು. ಇದರಿಂದ ಕಾರಿನ ಆಸೆಗೆ ಬಿದ್ದ ದಂಪತಿ ತಮ್ಮ ಸ್ನೇಹಿತರಲ್ಲಿ ಹಣ ಕೇಳಿದ್ದರು. ಅವರೂ ಮೊದಲ ಬಾರಿಗೆ ಕೇಳಿದ್ದಾನೆ ಎಂದು ಕೊಟ್ಟಿದ್ದರು. ಆದರೆ, ಮತ್ತೆ ಹಣ ಕೇಳಿದಾಗ, ಯಾಕೆ ಅಷ್ಟೊಂದು ಹಣ ಬೇಕಾಗಿದೆ ಎಂದು ಕೇಳಿದಾಗ ಆ ವ್ಯಕ್ತಿ ತಮ್ಮ ಸ್ನೇಹಿತರಿಗೆ ವಿವರಿಸಿದ. ಇದರಿಂದ ಸಂಶಯ ಗೊಂಡ ಆತನ ಸ್ನೇಹಿತರು, ಬೆಂಗಳೂರಿನಲ್ಲಿ ಇರುವ ಹ್ಯಾಂಕಾಂಗ್‌ ಬ್ಯಾಂಕ್‌ ಶಾಖೆಗೆ ಹೋಗಿ ನಿನ್ನ ಹೆಸರಿನಲ್ಲಿ ಖಾತೆ ತೆಗೆದಿದ್ದಾರಾ, ಮೀಸೋ ಕಂಪನಿ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಹೇಳಿದ್ದರು.ಬೆಂಗಳೂರಿಗೆ ಹೋಗಿ ವಿಚಾರಿಸಿದಾಗ, ತಾವು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ದಂಪತಿ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜಿಲ್ಲೆಯ ಹುನಗುಂದದ ಮಹಿಳೆ, ಮೀಶೋ ಆ್ಯಪ್‌ ಕಂಪನಿ ಹೆಸರಿನಲ್ಲಿ ಬಂದಿದ್ದ ಲಕ್ಕಿ ಡ್ರಾ ಬಹುಮಾನ ನಂಬಿ ಪತಿಗೆ ಹೇಳಿದ್ದು, ಇಬ್ಬರೂ ಕೂಡಿ ವಂಚನೆಗೊಳಗಾಗಿದ್ದಾರೆ. ಒಟ್ಟು 52 ಲಕ್ಷ ಕಳೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.
●ಎಂ. ನಾಗರಡ್ಡಿ, ಪಿಐ, ಸಿಇಎನ್‌ ಕ್ರೈಂ
ಪೊಲೀಸ್‌ ಠಾಣೆ, ಬಾಗಲಕೋಟೆ

*ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next