ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟ ನಂತರವೂ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಪ್ರಕರಣದಲ್ಲಿ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಚಾಟಿ ಬೀಸಿದೆ. ಸರ್ಕಾರ ಮತ್ತು ಬಿಡಿಎ ಎಲ್ಲಾ ಕಾನೂನು, ನಿಬಂಧನೆ ಮತ್ತು ಅನುಸರಣೆಗಳನ್ನು ಉಲ್ಲಂ ಸಿದೆ ಎಂದು ಅಭಿಪ್ರಾಯಪಟ್ಟಿದೆ. ಸೂಕ್ತ ಪರಿಸರ ಅನುಮತಿ ಪಡೆಯದೆ ಉಕ್ಕಿನ ಮೇಲ್ಸೇತುವ ಯೋಜನೆ ಮುಂದುವರಿಸದಂತೆ ಬಿಡಿಎಗೆ ಸೋಮವಾರ ಸ್ಪಷ್ಟ ನಿರ್ದೇಶನ ನೀಡಿದೆ.
ಉಕ್ಕಿನ ಮೇಲ್ಸೇತುವೆ ಯೋಜನೆ ವಿರೋಧಿಸಿ “ಸಿಟಿಜನ್ ಆ್ಯಕ್ಷನ್ ಫೋರಂ’ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣಿಯನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸಿರುವ ಚೆನ್ನೈನ ಹಸಿರು ನ್ಯಾಯಾಧಿಕರಣ, “ಈ ಯೋಜನೆ ರಸ್ತೆ ವಿಸ್ತರಣೆ ಕಾರ್ಯಕ್ರಮವಷ್ಟೇ ಎಂಬ ರಾಜ್ಯ ಸರ್ಕಾರದ ವಾದವನ್ನೂ ತಳ್ಳಿಹಾಕಿ, ಇದೊಂದು ಪ್ರದೇಶಾಭಿವೃದ್ಧಿ ಯೋಜನೆ. ಹೀಗಾಗಿ ಪರಿಸರ ಅನುಮತಿ ಪಡೆಯುವುದು ಕಡ್ಡಾಯ,” ಎಂದು ಸ್ಪಷ್ಟಪಡಿಸಿದೆ.
ಉಕ್ಕಿನ ಮೇಲ್ಸೇತುವೆ ಯೋಜನೆ ಪ್ರಶ್ನಿಸಿದ್ದ ಅರ್ಜಿದಾರರು, “2006ರ ಪರಿಸರದ ಪರಿಣಾಮ ನಿರ್ಧರಿಸುವಿಕೆ ಅಧಿಸೂಚನೆ ಪ್ರಕಾರ ಇದಕ್ಕೆ ಪರಿಸರ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಬಿಡಿಎ ಪರಿಸರ ಅನುಮತಿ ಪಡೆಯದೆ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಅದರಲ್ಲಿ ಅತಿ ಕಡಿಮೆ ದರ ನಮೂದಿಸುವ ಮೂಲಕ “ಎಲ್ ಆ್ಯಂಡ್ ಟಿ’ ಕಂಪನಿ ಗುತ್ತಿಗೆ ಪಡೆದಿತ್ತು,” ಎಂದು ಆರೋಪಿಸಿದ್ದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, “ಪರಿಸರದ ಪರಿಣಾಮ ನಿರ್ಧರಿಸುವಿಕೆ ಅಧಿಸೂಚನೆ ಪ್ರಕಾರ ಪ್ರದೇಶಾಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಪರಿಸರ ಅನುಮತಿ ಬೇಕು. ಆದರೆ, ಉಕ್ಕಿನ ಮೇಲ್ಸೇತುವೆ ಯೋಜನೆಯು ರಸ್ತೆ ವಿಸ್ತರಣೆ ಕಾರ್ಯವಾಗಿದ್ದು, ಪರಿಸರ ಅನುಮತಿ ಅಗತ್ಯವಿಲ್ಲ. ಹೀಗಾಗಿ ಯೋಜನೆ ಅಧಿಸೂಚನೆ ವ್ಯಾಪ್ತಿಗೆ ಬರುವುದಿಲ್ಲ,” ಎಂದು ಹೇಳಿದ್ದರು. ಆದರೆ, ಈ ವಾದವನ್ನು ನ್ಯಾಯಾಧಿಕರಣ ತಳ್ಳಿಹಾಕಿದೆ.
ಉಕ್ಕಿನ ಮೇಲ್ಸೇತುವೆಗೆ ಪರಿಸರ ಅನುಮತಿ ಪಡೆಯದ ಕಾರಣ ಅದು ಕಾನೂನು ಬಾಹಿರವಾಗುತ್ತದೆ ಎಂಬ ನಮ್ಮ ವಾದವನ್ನು ಹಸಿರು ನ್ಯಾಯಾಧಿಕರಣ ಎತ್ತಿಹಿಡಿದ್ದಿದೆ. ಪರಿಸರ ಅನುಮತಿ ಪಡೆಯದೆ ಯೋಜನೆ ಮುಂದುವರಿಸಬಾರದು ಎಂದು ಬಿಡಿಎಗೆ ನಿರ್ದೇಶಿಸಿರುವುದು ಸ್ವಾಗತಾರ್ಹ.
-ರಾಜೀವ್ ಚಂದ್ರಶೇಖರ್, ರಾಜ್ಯಸಭೆ ಸದಸ್ಯ