ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿನ ವಾಯು ಗುಣಮಟ್ಟ ಅತ್ಯಂತ ಕಳಪೆ ಹಾಗೂ ಅನಾರೋಗ್ಯಕಾರಿಯಾಗಿರುವಾಗ ಭಾರತ – ಲಂಕಾ ನಡುವಿನ 3ನೇ ಟೆಸ್ಟ್ ಪಂದ್ಯವನ್ನು ಇಲ್ಲಿ ಆಡಿಸಲು ಅನುಮತಿ ನೀಡಿದ್ದಾದರೂ ಏಕೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ದಿಲ್ಲಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನಗರದಲ್ಲಿನ ತೀವ್ರವಾದ ವಾಯು ಮಾಲಿನ್ಯವನ್ನು ನಿರ್ವಹಿಸುವ ಸಲುವಾಗಿ ತನ್ನ ಆದೇಶದ ಪ್ರಕಾರ ಇನ್ನೂ ಕ್ರಿಯಾ ಯೋಜನೆಯನ್ನು ಸಲ್ಲಿಸದಿರುವ ದಿಲ್ಲಿಯ ಆಪ್ ಸರಕಾರಕ್ಕೆ ಎನ್‌ಜಿಟಿ ಛೀಮಾರಿ ಹಾಕಿತು.
ಎನ್‌ಜಿಟಿ ಅಧ್ಯಕ್ಷ, ಜಸ್ಟಿಸ್ ಸ್ವತಂತ್ರ ಕುಮಾರ್ ಅವರು ಆಪ್ ಸರಕಾರ, ಎನ್‌ಜಿಟಿಯ ನಿರ್ದಿಷ್ಟ ಆದೇಶಕ್ಕೆ ಅನುಗುಣವಾಗಿ ದಿಲ್ಲಿ ವಾಯು ಮಾಲಿನ್ಯ ನಿರ್ವಹಣೆ ಕುರಿತ ಕ್ರಿಯಾ ಯೋಜನೆಯನ್ನು ಸಲ್ಲಿಸದಿರುವಲ್ಲಿ ತೋರಿರುವ ನಿರ್ಲಕ್ಷ್ಯ ಹಾಗೂ ವೈಫಲ್ಯವನ್ನು ಖಂಡಿಸಿ ಸರಕಾರದ ಕಾರ್ಯಶೈಲಿಯ ಬಗ್ಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು.
ವಿಚಾರಣೆಯ ವೇಳೆ ದಿಲ್ಲಿ ಸರಕಾರ ವಾಯು ಮಾಲಿನ್ಯ ಕುರಿತಾದ ತನ್ನ ಕ್ರಿಯಾ ಯೋಜನೆಯನ್ನು ಸಲ್ಲಿಸಲು ತನಗೆ ಇನ್ನಷ್ಟು ಕಾಲಾವಕಾಶ ಬೇಕಿದೆ; ಏಕೆಂದರೆ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪರಿಸರ ಕಾರ್ಯದರ್ಶಿಯನ್ನು ಈಚೆಗೆ ಬದಲಾಯಿಸಲಾಗಿದೆ ಎಂದು ಹೇಳಿತು.
ಆಗ ಎನ್‌ಜಿಟಿ, ದಿಲ್ಲಿ ಸರಕಾರಕ್ಕೆ ವಾಯು ಮಾಲಿನ್ಯ ಕ್ರಿಯಾ ಯೋಜನೆ ಸಲ್ಲಿಸಲು 48 ತಾಸುಗಳ ಗಡುವು ವಿಧಿಸಿ ಆದೇಶ ಹೊರಡಿಸಿತು.
ಲಂಕೆಯ ಆಟಗಾರರು ದಿಲ್ಲಿಯ ಫಿರೋಜ್‌ಶಾ ಕೋಟ್ಲಾ ಮೈದನಾದಲ್ಲಿ ಅತ್ಯಂತ ಅನಾರೋಗ್ಯಕಾರಿ ವಾಯು ಗುಣಮಟ್ಟದ ಕಾರಣ ತಮಗೆ ಉಸಿರು ಬಿಗಿಹಿಡಿದಂತಹ ಅನುಭವ ವಾಗುತ್ತಿರುವುದರಿಂದ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮುಖಕ್ಕೆ ಮಾಸ್ಟ್ ಧರಿಸಿ ಪ್ರತಿಭಟನೆ ಸಲ್ಲಿಸಿ, ಅಂಗಣದಲ್ಲೇ ಕುಳಿತ ಬಿಟ್ಟ ಘಟನೆ ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಯಿತು.
ಈ ವಿದ್ಯಮಾನ 140 ವರ್ಷ ಕ್ರೀಡಾ ಇತಿಹಾಸದಲ್ಲೇ ಮೊದಲ ಘಟನೆಯಾಗಿರುವುದು ದಾಖಲಾಗಿರುವುದು ಕೂಡ ದಿಲ್ಲಿಗೆ ಮತ್ತು ದೇಶಕ್ಕೆ ಅವಮಾನಕಾರಿಯಾಗಿದೆ ಎಂದು ತಿಳಿಯಲಾಗಿದೆ.