Advertisement
ಡಿಫೈ ಎನ್ನುವುದು ಡಿಸೈನ್ ಎಜುಕೇಷನ್ ಫಾರ್ ಯುವರ್‌ಸೆಲ್ಫ್ ಎಂಬುದರ ಸಂಕ್ಷಿಪ್ತ ರೂಪ. ಅಂದರೆ ಇಲ್ಲಿ ಶಾಲೆಗಳನ್ನು ವಿದ್ಯಾರ್ಥಿಗಳೇ ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ. ತಮ್ಮ ಇಷ್ಟದ ಕ್ಷೇತ್ರದ ಬಗ್ಗೆ ಥಿಯರಿ ಮಾತ್ರವಲ್ಲದೆ ಪ್ರಾÂಕ್ಟಿಕಲ್‌ಗಳ ಮೂಲಕ ಕಲಿಯುತ್ತಾರೆ. ಅದಕ್ಕೆ ಬೇಕಾದ ವೇದಿಕೆಯನ್ನು ಡಿಫೈ ಸಂಸ್ಥೆ ಒದಗಿಸುತ್ತದೆ. ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದೆ ತಾವು ಯಾವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದೇ ತಿಳಿದಿರುವುದಿಲ್ಲ. ಹೆತ್ತವರೋ, ನೆಂಟರಿಷ್ಟರೋ ಹೇಳಿದ ಕೋರ್ಸನ್ನು ಆರಿಸಿಕೊಂಡು ಎಷ್ಟೋ ಸಮಯದ ಬಳಿಕ ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಂಡು ಮುಂಚೆಯೇ ಗೊತ್ತಾಗಿದ್ದರೆ ಚೆನ್ನಾಗಿತ್ತು ಎಂದು ಪರಿತಪಿಸುತ್ತಾರೆ. ಆದರೆ, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಂಡು ಅದರಲ್ಲೇ ಮುಂದುವರಿಯುವಂತಾದರೆ ಎಷ್ಟು ಚೆನ್ನ ಅಲ್ಲವೆ? ಅದೇ ಡಿಫೈ ಸಂಸ್ಥೆಯ ಉದ್ದೇಶ.
Related Articles
ಸಂಸ್ಥೆಯ ಸ್ಥಾಪಕ ಅಭಿಜಿತ್ ಸಿನ್ಹಾ ಕೆಲ ವರ್ಷಗಳ ಹಿಂದೆ ಸರಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡುತ್ತಿದ್ದರು. ಕಂಪ್ಯೂಟರ್‌ನಲ್ಲಿ ಗೇಮ್‌ಗಳನ್ನು ಹಾಕಿಕೊಟ್ಟು ಮಕ್ಕಳನ್ನು ಆಡಲು ಬಿಡುತ್ತಿದ್ದರು. ಕಂಪ್ಯೂಟರನ್ನೇ ನೋಡದ ಮಕ್ಕಳು ಸ್ವಲ್ಪವೇ ಹೊತ್ತಿನಲ್ಲಿ ಆಟದ ನಿಯಮಗಳನ್ನು ಕಲಿತು ಆಟ ಆಡಲು ಶುರುಮಾಡಿದ್ದರು. ಅದನ್ನು ನೋಡಿದ ಅಭಿಜಿತ್‌ಗೆ ಆಶ್ಚರ್ಯ. ಇಂಗ್ಲಿಷ್ ಬಾರದ ಮಕ್ಕಳು, ಕಂಪ್ಯೂಟರ್ ಆಪರೇಟ್ ಮಾಡಲು ಬಾರದ ಮಕ್ಕಳು ಅದು ಹೇಗೆ ತಮ್ಮಷ್ಟಕ್ಕೆ ಕಲಿತುಬಿಟ್ಟರು ಎಂದು. ಆ ಸಂದರ್ಭದಲ್ಲಿ ಮೊಳಕೆ ಒಡೆದಿದ್ದೇ ಡಿಫೈ ಸಂಸ್ಥೆ ಕಟ್ಟುವ ಐಡಿಯಾ.
Advertisement
ಏನ್ ಮಾಡ್ತಾರೆ?– ಇಲ್ಲಿ ಮಕ್ಕಳು ನಾಲ್ಕು ಹಂತಗಳಲ್ಲಿ ಜ್ಞಾನಾರ್ಜನೆ ಮಾಡುತ್ತಾರೆ.
– ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಳ್ಳುವುದು
– ಪ್ರಯೋಗ ಮಾಡುವುದು, ತಪ್ಪುಗಳ ಮೂಲಕ ಕಲಿಯುವುದು
– ತಮ್ಮ ಸುತ್ತಮುತ್ತಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ರೂಪಿಸುವುದು
– ಆ ಸಮಸ್ಯೆ ಕುರಿತು ಆಳವಾದ ಅಧ್ಯಯನ ನಡೆಸಿ ತಾವು ಕಂಡು ಹಿಡಿದ ಪರಿಹಾರವನ್ನು ಉತ್ತಮ ಪಡಿಸುವುದು. ಸಾಂಪ್ರದಾಯಿಕ ಶಾಲೆಗಳಿಗಿಂತ ಭಿನ್ನವಾದ ಡಿಫೈ ಶಾಲೆಗಳಿಗೆ ನೂಕ್ ಎಂದು ಹೆಸರು. ಸುಮಾರು 500- 1000 ಚದರ ಅಡಿಗಳಷ್ಟು ವಿಸ್ತಾರದ ಕೋಣೆಯಲ್ಲಿ ಮಕ್ಕಳನ್ನು ಅವರ ಪಾಡಿಗೆ ಬಿಡುತ್ತಾರೆ. ಅಲ್ಲಿ ಇಂಟರ್‌ನೆಟ್ ಸಂಪರ್ಕವಿರುತ್ತೆ, ಲ್ಯಾಪ್‌ಟಾಪ್‌ಗ್ಳಿರುತ್ತೆ. ಚಿಕ್ಕ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಟೂಲ್ ಕಿಟ್ ಇರುತ್ತೆ. ಇವುಗಳ ಜೊತೆಗೆ ಸ್ಥಳೀಯವಾಗಿ ಸಿಕ್ಕ ಪ್ಲಾಸ್ಟಿಕ್, ಮರದ ತುಂಡುಗಳು, ಕಬ್ಬಿಣ ಮುಂತಾದ ಗುಜರಿ ವಸ್ತುಗಳೂ ಇರುತ್ತವೆ. ಒಬ್ಬ ವಿದ್ಯಾರ್ಥಿಗೆ ತಮ್ಮೂರಿನ ಹೊಳೆ ಎಷ್ಟರಮಟ್ಟಿಗೆ ಕಲುಷಿತವಾಗಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದಿಟ್ಟುಕೊಳ್ಳೋಣ. ಆತನಿಗೆ ಯಾರೂ ಸಹಾಯ ಮಾಡುವುದಿಲ್ಲ. ಆತನೇ ತನ್ನ ಸುತ್ತಲಿರುವ ವಸ್ತುಗಳನ್ನು ಬಳಸಿ ದೋಣಿಯ ಮಾದರಿಯನ್ನು ತಯಾರಿಸುತ್ತಾನೆ. ಅದು ನೀರಿನಲ್ಲಿ ಮುಳುಗುತ್ತೆ ಎಂದು ಗೊತ್ತಾದಾಗ ಮುಳುಗದಂತೆ ಏನು ಮಾಡಬೇಕೋ ಅದನ್ನು ಮಾಡುತ್ತಾನೆ. ಹೀಗೆ ಪ್ರತಿ ಹಂತದಲ್ಲಿಯೂ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಾ ಜ್ಞಾನವನ್ನು ಸಂಪಾದಿಸುತ್ತಾ ಹೋಗುತ್ತಾನೆ. ತಂಡದ ಸದಸ್ಯರಿಗೆ ಪರಿಹಾರ ಸಿಕ್ಕದೇ ಇದ್ದ ಸಂದರ್ಭದಲ್ಲಿ ಸಂಸ್ಥೆಯವರು ಇಂಟರ್‌ನೆಟ್‌ನಲ್ಲಿ ಪರಿಹಾರ ಕಂಡುಕೊಳ್ಳುವುದನ್ನು ಕಲಿಸಿಕೊಡುತ್ತಾರೆ. ಈ ಪ್ರಾಜೆಕ್ಟ್‌ನಲ್ಲಿ ಬಾಗವಹಿಸುವವರಲ್ಲಿ ಕಾಲೇಜನ್ನು ಅರ್ಧಕ್ಕೇ ಬಿಟ್ಟ ಮಕ್ಕಳೂ ಇದ್ದಾರೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳೂ ಇದ್ದಾರೆ. ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ಇವರನ್ನು ಸೇರಿಕೊಳ್ಳಬಹುದು. ಫಲಿತಾಂಶ
ಪರೀಕ್ಷೆಯೇ ಇಲ್ಲದಿದ್ದರೂ ಫಲಿತಾಂಶವನ್ನು ಇಲ್ಲಿ ಕಾಣಬಹುದಾಗಿದೆ. ಹಳ್ಳಿಯ ನಿವಾಸಿ 20 ವರ್ಷದ ದೀಪಿಕಾ ಚಿಕ್ಕ ವಯಸ್ಸಿನಲ್ಲೇ ಗೃಹಿಣಿಯಾದವರು. ಅವರೀಗ ಕಂಪ್ಯೂಟರ್ ಬಳಸುತ್ತಾರೆ, ಕರಕುಶಲ ವಸ್ತುಗಳ ತಯಾರಿಯನ್ನು ಯೂಟ್ಯೂಬ್ ನೋಡಿ ಕಲಿಯುತ್ತಿದ್ದಾರೆ. ಡಿಪ್ಲೊಮಾ ಮುಗಿಸಿರುವ 19 ವರ್ಷದ ಕುಶಲ್ ರೇಡಿಯೊ ನಿಯಂತ್ರಿತ ವಿಮಾನ, ಸ್ವಯಂಚಾಲಿತ ದೋಣಿಯ ಮಾದರಿಗಳನ್ನು ತಯಾರಿಸಿದ್ದಾನೆ. ಸದಸ್ಯರು ತಯಾರಿಸಿದ ಪ್ರಾಜೆಕ್ಟ್ಗಳು ತುಂಬಾ ಸಹಕಾರಿ ಮತ್ತು ಉಪಕಾರಿ ಎಂದು ಕಂಡುಬಂದರೆ ಡಿಫೈನವರು ಅದನ್ನು ಅನುಷ್ಟಾನಕ್ಕೆ ತರಲು ಹಣಸಹಾಯವನ್ನೂ ಮಾಡುತ್ತಾರೆ. ಸಂಪರ್ಕ- 9880893823
ಇಮೇಲ್- info@projectdefy.org