ಉಳ್ಳಾಲ: ಮೂರು ವರ್ಷಗಳ ಕೇಂದ್ರ ಸರಕಾರದ ಆಡಳಿತದಲ್ಲಿ ರೈತರು ಸಹಿತ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು, ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಲಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಹೇಳಿದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್‌ನ ಆಶ್ರಯದಲ್ಲಿ, ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಆಗ್ರಹಿಸಿ ತೊಕ್ಕೊಟ್ಟು ಎಸ್‌ಬಿಐ ಬ್ಯಾಂಕಿನ ಎದುರು ಏರ್ಪಡಿಸಿದ್ದ ಪ್ರತಿಭಟನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ರೈತರ ಸಾಲ ಮನ್ನಾ ಮಾಡಿದರೆ ಬೊಕ್ಕಸ ತುಂಬಲು ಸಾಧ್ಯವಿಲ್ಲ ಎಂದಿದ್ದರು. ಇಂದು ಅದೇ ಯಡಿಯೂರಪ್ಪ ಪ್ರತಿ ಜಿಲ್ಲೆಗೆ ಹೋಗಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಿರುವುದು ನಾಚಿಕೆಗೇಡು ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ರೈತ ವಿರೋಧಿ ಸರಕಾರ ವಾಗಿದ್ದು, ಇದರ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗರು ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಇದಕ್ಕೆ ರಾಜ್ಯದ ಜನತೆ ಮರುಳಾಗಬಾರದು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್. ಕರೀಂ, ತಾ.ಪಂ. ಸದಸ್ಯರಾದ ಸಿದ್ಧೀಕ್ ಕೊಳಂಗೆರೆ, ಜಬ್ಟಾರ್ ಬೋಳಿಯಾರ್, ಉಳ್ಳಾಲ ನಗರ ಸಭಾಧ್ಯಕ್ಷ ಹುಸೇನ್ ಕುಂಞಿಮೋನು, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ಬಾಝಿಲ್ ಡಿ’ಸೋಜಾ, ಭಾರತಿ, ಜೇನ್ ಶಾಂತಿ ಡಿ’ಸೋಜಾ, ಮಂಗಳೂರು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ., ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಹಿಳಾ ಮೋರ್ಚಾ ಅಧ್ಯಕ್ಷೆ , ದೇವಕಿ ಉಳ್ಳಾಲ್, ತಾ. ಪಂ. ಮಾಜಿ ಸದಸ್ಯ ಉಮ್ಮರ್ ಫಜೀರು, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಮೊದಿನ್ ಬಾವಾ, ಪುಷ್ಟಿ ಮಹಮ್ಮದ್, ಮುಖಂಡರಾದ ರಾಜೇಂದ್ರ ಬಂಡಸಾಲೆ, ಇಲಿಯಾಸ್, ರಿಚಾರ್ಡ್, ವಿನ್ಸೆಂಟ್, ನಾಸಿರ್ ಸಾಮಾನಿಗೆ, ಕಾರ್ತಿಕ್ ಪೂಜಾರಿ, ಸೇವಾದಳದ ಹೇಮಾ, ಪ್ರತಿಭಾ ಕಾಪಿಕಾಡ್, ವೈಭವ್ ಶೆಟ್ಟಿ, ವಿನೋದ್ ಶೆಟ್ಟಿ ತಲಪಾಡಿ, ಕಿಶೋರ್ ತೊಕ್ಕೊಟ್ಟು, ಪ್ರೇಮ್ ಬಿ. ದಾಸ್, ಕಿರಣ್ ಕಾಪಿಕಾಡ್, ಸಮೀರ್ ಪಜೀರು, ಪವನ್ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.