Advertisement

Kota Srinivas Poojary: ವಕ್ಫ್ ಬೋರ್ಡ್‌ ರೈತರ ಆಸ್ತಿ ಕಬಳಿಸುವುದು ನಿಲ್ಲಿಸಲಿ

10:22 PM Oct 29, 2024 | Team Udayavani |

ಉಡುಪಿ: ಈ ಹಿಂದೆ ಕಾಂಗ್ರೆಸ್‌ ಸರಕಾರ ಮಾಡಿದ್ದ ಒಂದು ತಪ್ಪಿನಿಂದ ಪ್ರಸ್ತುತ ವಿಜಯಪುರ ಜಿಲ್ಲೆಯ ರೈತರು 11,500 ಎಕರೆ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ರೈತರ ಹೆಸರಿನಲ್ಲಿದ್ದ ಪಹಣಿಯನ್ನು ಏಕಾಏಕಿ ವಕ್ಫ್ ಮಂಡಳಿ ಹೆಸರಿಗೆ ಮಾಡಲಾಗಿದೆ. ಇದು ವಿಜಯಪುರ ಜಿಲ್ಲೆ ಮಾತ್ರಲ್ಲದೇ ಉಡುಪಿ, ದ.ಕ. ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಗಿರುವ ಸಾಧ್ಯತೆಯಿದೆ. ಸರಕಾರ ಈ ಕೂಡಲೇ ರೈತರ ಹೆಸರಿಗೆ ಪಹಣಿ ವಾಪಸ್‌ ಮಾಡಬೇಕು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. 11,500 ಎಕರೆ ರೈತರ ಭೂಮಿ ವಕ್ಫ್ ಬೋರ್ಡ್‌ ಸ್ವಾಧೀನಪಡಿಸಿಕೊಂಡಿದೆ. 1988ರಿಂದ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಪಹಣಿ ವಕ್ಫ್ ಬೋರ್ಡ್‌ ಪಾಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರ ರೂಪಿಸಿದ್ದ ಕಾನೂನಿನಿಂದ ಇದೆಲ್ಲ ಸಾಧ್ಯವಾಗಿದೆ. ಒಮ್ಮೆ ವಕ್ಫ್ ಬೋರ್ಡ್‌ ಇದು ನಮ್ಮ ಆಸ್ತಿ ಎಂದು ಗೊತ್ತುಪಡಿಸಿದರೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮೂಲಕ ಆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ನೀಡುವಂತೆ ಮಾಡಿದೆ. ಒಂದು ಸಮುದಾಯವನ್ನು ಓಲೈಸಲು ರಾಜ್ಯ ಸರಕಾರ ಹೀಗೆ ಮಾಡುತ್ತಿದೆ. ಜನರು ದಂಗೆ ಏಳುವುದೊಂದು ಬಾಕಿಯಿದೆ.

ಕಂದಾಯ ಸಚಿವರು ಮಾತನಾಡಿ 124 ರೈತರಿಗೆ ಕಣ್ತಪ್ಪಿನಿಂದ ನೋಟಿಸ್‌ ಹೋಗಿದೆ ಎಂದಿದ್ದಾರೆ. ಇದು ಗಂಭೀರ ತಪ್ಪು ಅಲ್ಲ ಎಂದಾದರೆ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಸರ್ವ ಜನಾಂಗದವರು ನಮ್ಮ ಸರಕಾರಕ್ಕೆ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಬಡವರು, ರೈತರ ಭೂಮಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಹೀಗಾಗಿಯೇ ವಕ್ಫ್ ವಿಚಾರದಲ್ಲಿ ಪಾರದರ್ಶಕತೆಗೆ ಕೇಂದ್ರ ಸರಕಾರ ಕಾನೂನು ರೂಪಿಸಿದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ಕಾಯ್ದೆ ಜಾರಿಯಾದ ಅನಂತರದಲ್ಲಿ ಪಾರದರ್ಶಕತೆ ಬರಲಿದೆ. ವಕ್ಫ್ ಬೋರ್ಡ್‌ ಅಕ್ರಮವಾಗಿ ಭೂಮಿ ವಶಪಡಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಹೋರಾಟ
ರೈತರು ಒಂದು ತುಂಡು ಭೂಮಿ ಕಳೆದುಕೊಳ್ಳಬಾರದು. ಬಿಜೆಪಿ ಇದನ್ನು ಹೋರಾಟವಾಗಿ ಕೈಗೆತ್ತಿಕೊಳ್ಳುತ್ತದೆ. ತಪ್ಪು ಮಾಡಿದವರ ಮೇಲೆ ಸರಕಾರ ಏನು ಕ್ರಮ ತೆಗೆದುಕೊಂಡಿದೆ? ತತ್‌ಕ್ಷಣವೇ ರೈತರಿಗೆ ಭೂಮಿ ಹಿಂದಿರುಗಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಗ್ರಾ.ಪಂ.ಗಳಿಗೆ ಅಧಿಕಾರ ನೀಡಿ
9/11 ಹಂಚಿಕೆಯ ಅಧಿಕಾರ ಈ ಹಿಂದೆ ಗ್ರಾಮ ಪಂಚಾಯತಿಗಳಿಗೆ ಇದ್ದವು. ಅದನ್ನು ಈಗ ಪ್ರಾಧಿಕಾರಕ್ಕೆ ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸರಕಾರ ತತ್‌ಕ್ಷಣವೇ ಈ ಅಧಿಕಾರವನ್ನು ಪುನಃ ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ರೇಷನ್‌ ಕಾರ್ಡ್‌ ಪರಿಶೀಲನೆ ಕೈಬಿಡಿ
ಗ್ಯಾರಂಟಿ ಫ‌ಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವುದು ಅಥವಾ ಇನ್ನಾéವುದೋ ಉದ್ದೇಶದಿಂದ ಬಿಪಿಎಲ್‌ ಕಾರ್ಡ್‌ ಪರಿಶೀಲನೆಗೆ ಮುಂದಾಗಿರುವುದನ್ನು ಸರಕಾರ ತತ್‌ಕ್ಷಣ ನಿಲ್ಲಿಸಬೇಕು. ಬಿಪಿಎಲ್‌ ಕಾರ್ಡ್‌ ರದ್ದತಿಯಿಂದ ಕೇಂದ್ರ ಸರಕಾರದ ಅಕ್ಕಿ, ಆಯುಷ್ಮಾನ್‌ ಯೋಜನೆಯ ಫ‌ಲ ಅನೇಕರಿಗೆ ಸಿಗುವುದಿಲ್ಲ. ಸರಕಾರ ಇದರಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಬಿ.ಕೆ. ಹರಿಪ್ರಸಾದ್‌ ಕ್ಷಮೆ ಯಾಚಿಸಲಿ
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಬಗ್ಗೆ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌ ನೀಡಿರುವ ಹೇಳಿಕೆ ಖಂಡನೀಯ. ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ. ಶ್ರೀಪಾದರು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಜನಾಂದೋಲನ ಮಾಡಿದವರು. ಶ್ರೀಪಾದರ ಬಗ್ಗೆ ಇಡೀ ರಾಷ್ಟ್ರದಲ್ಲಿಯೇ ವಿಶೇಷ ಗೌರವ ಇದೆ. ತತ್‌ಕ್ಷಣವೇ ಬಿ.ಕೆ. ಹರಿಪ್ರಸಾದ್‌ ಅವರು ಕ್ಷಮೆ ಕೇಳಬೇಕು ಎಂದವರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next